ಮಧ್ಯಪ್ರದೇಶ ಹನಿಟ್ರ್ಯಾಪ್: ಸುಲಿಗೆ ಹಣದಿಂದ ಐಟಿ, ರಿಯಾಲಿಟಿ ಸಂಸ್ಥೆ ಆರಂಭ

Update: 2019-09-29 18:10 GMT

ಭೋಪಾಲ್, ಸೆ. 29: ಮಧ್ಯಪ್ರದೇಶದ ಹನಿಟ್ರ್ಯಾಪ್‌ನ ರೂವಾರಿಗಳಾದ ಇಬ್ಬರು ಮಹಿಳೆಯರು ರಾಜ್ಯದ ಪ್ರಭಾವಶಾಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದರು. ಈ ಹಣದಿಂದ ಐಟಿ ಹಾಗೂ ರಿಯಾಲಿಟಿ ಸಂಸ್ಥೆಗಳನ್ನು ಆರಂಭಿಸಿದ್ದರು ಎಂಬುದು ಪುರಾವೆಗಳಿಂದ ತಿಳಿದುಬಂದಿದೆ. ಹನಿಟ್ರ್ಯಾಪ್‌ನ ಪ್ರಧಾನ ರೂವಾರಿ ಶ್ವೇತಾ ಜೈನ್ ಈ ವರ್ಷ ಕೇವಲ ಆರು ತಿಂಗಳ ಅವಧಿಯಲ್ಲಿ ಎರಡು ಖಾಸಗಿ ಲಿಮಿಟೆಡ್ ಕಂಪೆನಿಗಳನ್ನು ಆರಂಭಿಸಿದ್ದಳು. ಆಕೆ ಕಾರ್ಪೊರೇಟ್ ಶೈಲಿಯಲ್ಲಿ ವ್ಯವಹಾರ ನಡೆಸುತ್ತಿದ್ದಳು. ವಿಐಪಿಗಳೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಕಾಲೇಜು ವಿದ್ಯಾರ್ಥಿನಿಯರನ್ನು ಬಲವಂತಪಡಿಸುತ್ತಿದ್ದ ಆರೋಪಿ ಆರತಿ ದಯಾಳ್ ಇವುಗಳಲ್ಲಿ ಒಂದು ಕಂಪೆನಿಯ ನಿರ್ದೇಶಕಿಯಾಗಿದ್ದಳು. ಶ್ವೇತಾ ಜೈನ್ ಆಡಳಿತ ನಿರ್ದೇಶಕಿಯಾಗಿದ್ದಳು. ಆರು ತಿಂಗಳ ಬಳಿಕ ಜುಲೈ 26ರಂದು ಶ್ವೇತಾ ಜೈನ್ ಸಾಫ್ಟ್‌ವೇರ್ ಹಾಗೂ ಕಂಪ್ಯೂಟರ್ ಹಾರ್ಡ್‌ವೇರ್‌ಗೆ ಸಂಬಂಧಿಸಿದ ಇನ್ನೊಂದು ಕಂಪೆನಿ ಆರಭಿಸಿದ್ದಳು. ಅದಕ್ಕೆ ಆರತಿಯನ್ನು ನಿರ್ದೇಶಕಿಯನ್ನಾಗಿ ನಿಯೋಜಿಸಲಾಗಿತ್ತು. ಶ್ವೇತಾ ಜೈನ್ ಆಡಳಿತ ನಿರ್ದೇಶಕಿಯಾಗಿದ್ದಳು.

ಶ್ವೇತಾ ಜೈನ್ ಗೆಳತಿ ಬರ್ಖಾ ಸೋನಿ ಸಮರ್ಥ್ ಸಾಮಾಜಿಕ್ ಸೇವಾ ಸಂಸ್ಥಾ ಸಮಿತಿ ಎಂಬ ಸರಕಾರೇತರ ಸಂಸ್ಥೆ ನಡೆಸುತ್ತಿದ್ದಳು. ಈ ಸಂಸ್ಥೆ ಸುಲಿಗೆಯಿಂದ ಸಂಗ್ರಹಿಸಿದ ಹಣವನ್ನು ರಕ್ಷಿಸುವ ಕೆಲಸ ಮಾಡುತ್ತಿತ್ತು. ಶ್ವೇತಾ ಜೈನ್ ರಿಯಲ್ ಎಸ್ಟೇಟ್ ಹಾಗೂ ನಿರ್ಮಾಣ ಕಂಪೆನಿ ನಡೆಸುತ್ತಿದ್ದಳು. ಕೆಲವು ಐಎಎಸ್ ಅಧಿಕಾರಿಗಳು ಪೋಷಕರಾಗಿರುವ ಆಕೆಯ ದೀಪ್ತಿಮಂಥಮ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ದೊಡ್ಡ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಂಡಿತ್ತು ಎಂದು ಮಧ್ಯಪ್ರದೇಶ ಪೊಲೀಸ್‌ನ ವಿಶೇಷ ತನಿಖಾ ತಂಡ (ಸಿಟ್) ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News