ಬಿಲ್ಕಿಸ್ ಬಾನೋಗೆ 2 ವಾರಗಳೊಳಗೆ 50 ಲಕ್ಷ ರೂ. ಪರಿಹಾರ ನೀಡಿ: ಗುಜರಾತ್ ಸರಕಾರಕ್ಕೆ ಸುಪ್ರೀಂ ಕೋರ್ಟ್

Update: 2019-09-30 09:21 GMT

ಹೊಸದಿಲ್ಲಿ, ಸೆ.30:  ಗುಜರಾತ್ ರಾಜ್ಯದಲ್ಲಿ 2002ರಲ್ಲಿ ನಡೆದ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬಾನೋಗೆ  ಎರಡು ವಾರಗಳೊಳಗೆ 50 ಲಕ್ಷ ರೂ. ಪರಿಹಾರ, ಉದ್ಯೋಗ ಹಾಗೂ ವಸತಿ ಸೌಲಭ್ಯವನ್ನು ಒದಗಿಸಬೇಕೆಂದು ಸುಪ್ರೀಂ ಕೋರ್ಟ್ ಗುಜರಾತ್ ಸರಕಾರಕ್ಕೆ ಗಡುವು ವಿಧಿಸಿದೆ.

ಎಪ್ರಿಲ್ ತಿಂಗಳಲ್ಲಿ  ಪರಿಹಾರ, ಉದ್ಯೋಗ ಹಾಗೂ ವಸತಿ ಒದಗಿಸುವ ಕುರಿತಂತೆ  ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮರು ಪರಿಶೀಲಿಸುವಂತೆ ಗುಜರಾತ್ ಸರಕಾರ ಸಲ್ಲಿಸಿದ್ದ ಅಪೀಲನ್ನು ಸುಪ್ರೀಂ ಕೋರ್ಟ್ ತಿರಸ್ಕರಿದೆ.

ಮಾರ್ಚ್ 3, 2003ರಂದು ಅಹ್ಮದಾಬಾದ್ ಸಮೀಪದ ರಂಧೀಕ್ಪುರ್ ಗ್ರಾಮದಲ್ಲಿ ಬಿಲ್ಕಿಸ್ ಬಾನೋ ಕುಟುಂಬದ ಮೇಲೆ ದಾಳಿ ನಡೆದಿತ್ತು. ಆಗ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತಲ್ಲದೆ ಆಕೆಯ ಎರಡೂವರೆ ವರ್ಷದ ಪುತ್ರಿ ಸಹಿತ ಕುಟುಂಬದ 14 ಮಂದಿ ಸದಸ್ಯರನ್ನು ಹತ್ಯೆಗೈಯ್ಯಲಾಗಿತ್ತು.

ಜನವರಿ 21,2008ರಂದು ವಿಶೇಷ ನ್ಯಾಯಾಲಯವೊಂದು ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರವೆಸಗಿದ ಹಾಗೂ ಕುಟುಂಬದ ಏಳು ಸದಸ್ಯರನ್ನು ಕೊಂದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕರ್ತವ್ಯಲೋಪವೆಸಗಿದ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪ ಹೊತ್ತ ಐದು ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ವೈದ್ಯರನ್ನು ಆಗ ದೋಷಮುಕ್ತಗೊಳಿಸಲಾಗಿತ್ತಾದರೂ ಹೈಕೋರ್ಟ್ ತನ್ನ ಮೇ 4, 2017ರ ಆದೇಶದಲ್ಲಿ ಈ ಏಳು ಮಂದಿಯನ್ನು ದೋಷಿಗಳೆಂದು ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News