ಸಾಹಿತಿ ಎಸ್.ಎಲ್.ಭೈರಪ್ಪ ವಿರುದ್ಧ ಜನವಾದಿ ಮಹಿಳಾ ಸಂಘಟನೆ ಆಕ್ರೋಶ

Update: 2019-09-30 14:27 GMT
ಎಸ್.ಎಲ್.ಭೈರಪ್ಪ

ಬೆಂಗಳೂರು, ಸೆ.30: ಕನ್ನಡ ನಾಡು ನೆರೆ ಬರದಲ್ಲಿ ಬಳಲಿ ಬೆಂಡಾಗಿದೆ. ಸಂತ್ರಸ್ತರಿಗೆ ಹಸಿವು ಮಾತ್ರ ಹಾಸಿ ಹೊದೆಯಲು ಉಳಿದ ಆಸ್ತಿ. ಹೆಚ್ಚುತ್ತಿರುವ ನಿರುದ್ಯೋಗ, ಬಡತನ ಮತ್ತು ವಲಸೆ, ಅನ್ನದಾತರ ಸಂಕಟ ಇವುಗಳೆಲ್ಲ ಮನುಷ್ಯರಾದವರಿಗೆ ಅರ್ಥವಾಗುವುದು ಸಹಜ. ಆದರೆ, ಮೈಸೂರು ದಸರಾ ಉತ್ಸವದ ಉದ್ಘಾಟನೆ ಮಾಡಿದ ಸಾಹಿತಿ ಎಸ್.ಎಲ್.ಭೈರಪ್ಪನವರಿಗೆ ಮಾತ್ರ ಇದಾವುದೂ ಕಾಣಿಸಲೇ ಇಲ್ಲ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. 

ಬಹುಶಃ ಅವರು ಶುದ್ಧ(!?) ಸಾಹಿತಿಗಳಾದ್ದರಿಂದ ನಾಡಿನ ಸಮಸ್ಯೆ, ಸಂಕಟಗಳು ಅವರಿಗೆ ಬೇಕಿಲ್ಲ. ಆದರೆ ಒಬ್ಬ ಸಾಹಿತಿಗೆ ಇರಬೇಕಾದ ಕನಿಷ್ಠ ಜ್ಞಾನವೂ ಇಲ್ಲದ ಭೈರಪ್ಪ, ನಮ್ಮ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಮಾತ್ರವಲ್ಲ ತಾಯಿಯನ್ನು ಅವಮಾನಿಸಿದ್ದಾರೆ ಎಂದು ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷೆ ದೇವಿ ಹಾಗೂ ಪ್ರಧಾನ ಕಾರ್ಯದರ್ಶಿ ಗೌರಮ್ಮ ಕಿಡಿಗಾರಿದ್ದಾರೆ. ಮುಟ್ಟಾದ ಮಹಿಳೆ ದೇಗುಲಕ್ಕೆ ಹೋಗಬಾರದೆಂಬ ಅವರ ನಿಲುವು ತಾಯಿ ದ್ರೋಹಿಯಾಗಿದೆ. ಮುಟ್ಟಿನಲ್ಲಿಯೇ ಜಗ ನಾಟಿದೆ. ಇವರು ಹುಟ್ಟಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸಲಿ. ಅಯ್ಯಪ್ಪ ದೇವಳದೊಳಗೆ ಮಹಿಳೆಗೆ ಪ್ರವೇಶ ಕೊಡಬೇಕು ಎಂದು ಸುಪ್ರೀಂ ಕೋರ್ಟಿಗೆ ಹೋಗಿದ್ದು ಯಾರು ಎಂಬ ಅರಿವು ಭೈರಪ್ಪಗಿದೆಯೇ ? ಎಂದು ಅವರು ಪ್ರಶ್ನಿಸಿದ್ದಾರೆ.

ಕೇರಳದ ಯಂಗ್ ಲಾಯರ್ಸ್ ಹೆಸರಿನಲ್ಲಿ ಆರೆಸೆಸ್ಸ್ ಕಾರ್ಯಕರ್ತರು ಕೋರ್ಟಿಗೆ ಹೋಗಿದ್ದರು. ಸುಪ್ರಿಂ ಕೋರ್ಟು ಸಂವಿಧಾನವನ್ನು ಎತ್ತಿ ಹಿಡಿದು ತೀರ್ಪಿತ್ತಿದೆ ಮತ್ತು ಕೇರಳ ಸರಕಾರ ಸುಪ್ರೀಂ ಕೋರ್ಟಿನ ತೀರ್ಪು ಜಾರಿ ಮಾಡಿದೆ. ಇದಕ್ಕೆ ಕಮ್ಯುನಿಸ್ಟರ ಮೇಲೆ ಯಾಕೆ ಉರಿದುಕೊಳ್ಳುವುದು ಈ ಭೈರಪ್ಪ? ಎಂದು ಅವರು ಹೇಳಿದ್ದಾರೆ. ಭಾರತದ ಸಂವಿಧಾನದಲ್ಲಿ ಆಸ್ತಿಕರಿಗೂ, ನಾಸ್ತಿಕರಿಗೂ ಸಮಾನ ಅವಕಾಶ ಹಕ್ಕು ಕರ್ತವ್ಯಗಳಿವೆ. ಆದರೆ ದೇವರ ಅಸ್ತಿತ್ವ ನಂಬದವರನ್ನು ಅಪಮಾನಿಸುವ ಹಕ್ಕು ಈ ಭೈರಪ್ಪಗೆ ಕೊಟ್ಟಿದ್ದು ಯಾರು ? ಭೈರಪ್ಪನವರ ಇಂತಹ ಅಯೋಗ್ಯ ಮಾತುಗಳನ್ನು ಕನ್ನಡ ನಾಡು ಯಾವತ್ತೂ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಚಾರಿತ್ರಿಕ ತಿಳುವಳಿಕೆ ಇಲ್ಲದಿದ್ದರೆ ಶರಣ, ಸೂಫಿ ಸಂತ ಮತ್ತು ಕುವೆಂಪು ಅವರಂಥ ಅಸಂಖ್ಯ ಸಾಹಿತಿಗಳ ಕೃತಿಗಳನ್ನಾದರೂ ಓದಲಿ. ಕನ್ನಡ ಸಂಸ್ಕೃತಿಯು ಯೋಗಿಯನ್ನು, ಮಹಿಳೆಯನ್ನು, ಸಮಸ್ತ ಶ್ರಮಿಕರನ್ನು ಗೌರವಿಸಿದೆ. ಕನ್ನಡ ನಾಡಿನ ಜನ ಬರ ನೆರೆಯಲ್ಲಿ ನೊಂದಾಗ ಪ್ರಭುತ್ವಕ್ಕೆ ಬುದ್ಧಿ ಹೇಳಿ ಜನರ ನೋವಿಗೆ ಮಿಡಿವಂತೆ ತಿಳಿ ಹೇಳಿದೆ ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಕೇಂದ್ರ ಮಂತ್ರಿಗಳನ್ನು ಅಕ್ಕಪಕ್ಕ ಕೂಡಿಸಿಕೊಂಡು ಮಾತಾಡಿದ್ದೇನು ಇವರು? ಈವರೆಗೆ ನೆರೆ ಬರ ಸಂತ್ರಸ್ತರಿಗೆ ಒಂದು ಪೈಸೆ ನೆರವು ಯಾಕೆ ಮಾಡಿಲ್ಲ ಎಂದು ಕೇಳುವ ಎದೆಗಾರಿಕೆ ಯಾಕೆ ತೋರಿಸಲಿಲ್ಲ? ಭೈರಪ್ಪನವರು ಹೊಟ್ಟೆಗೆ ತಿನ್ನುವ ವೆಜ್ ಆಹಾರ ಬೆಳೆದು ಕೊಡುವುದು ಇದೇ ನೆರೆ ಬರದಲ್ಲಿ ನರಳುತ್ತಿರುವ ಜನ. ಆದರೆ ಭೈರಪ್ಪ ಮಾತ್ರ ಉಂಡ ಮನೆಯ ಜಂತಿ ಎಣಿಸುವಂತೆ ಕನ್ನಡ ನಾಡನ್ನು ಅಪಮಾನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರ ಅವೈಜ್ಞಾನಿಕ ವಿಚಾರ ಧಾರೆ, ಸಂವಿಧಾನ ವಿರೋಧೀ ಮಾತುಗಳು, ಮೌಢ್ಯ, ಕೋಮುವಾದ ಬಿತ್ತುವ ಮತ್ತು ಮಹಿಳಾ ವಿರೋಧಿ ನಡೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News