ದಸರಾ, ಜಂಬೂ ಸವಾರಿ ನಿಷೇಧಕ್ಕೆ ಆಗ್ರಹಿಸಿ ನಾಳೆ ಪಂಜಿನ ಮೆರವಣಿಗೆ: ಮಾಜಿ ಮೇಯರ್ ಪುರುಷೋತ್ತಮ್

Update: 2019-09-30 16:49 GMT

ಮೈಸೂರು,ಸೆ.30: ದಸರಾ ಹಾಗೂ ಜಂಬೂ ಸವಾರಿಯನ್ನು ನಿಷೇಧಿಸಬೇಕೆಂದು ಮಹಿಷ ದಸರಾ ಸಮಿತಿಯಿಂದ ವಿಜಯ ದಶಮಿಯವರೆಗೂ ದಿನಕ್ಕೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನಾಳೆ ಅಶೋಕಪುರಂನಲ್ಲಿ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ದಸರಾ ಉದ್ಘಾಟನೆ ವೀಕ್ಷಣೆಗೆಂದು ತೆರಳಿದ್ದ ಹಲವರನ್ನು ವಿನಾಕಾರಣ ಬಂಧಿಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಸರಾದಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದ್ದು, ಮೂಲ ನಿವಾಸಿಗಳ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಲಾಗಿದೆ ಎಂದು ಆರೋಪಿಸಿದರು.

ಇತಿಹಾಸ ತಿಳಿಯದೆ ಕೆಲ ಅಜ್ಞಾನಿಗಳು ಮಹಿಷಾ ದಸರಾ ಆಚರಣೆಗೆ ಅಡ್ಡಿಪಡಿಸಿದ್ದು, ಅದೇ ರೀತಿ ದಸರಾ ಹಾಗೂ ಜಂಬೂ ಸವಾರಿಯನ್ನು ನಿಷೇಧಿಸಬೇಕೆಂದು ನಾವು ಹೋರಾಟ ನಡೆಸುತ್ತೇವೆ. ಅಲ್ಲದೇ ಈ ಹಬ್ಬದ ನಿಷೇಧಕ್ಕೆ ಸಾವಿರಾರು ಜನ ಸಹಿ ಹಾಕಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಷಂಡರು ಎಂದು ನಿಂಧಿಸಿದ ಪೊಲೀಸರ ಸರ್ಪಗಾವಲಿನಲ್ಲಿಯೇ ದಸರಾ ಉದ್ಘಾಟಿಸಿದ ಪ್ರತಾಪ ಸಿಂಹ ಒಬ್ಬ ಷಂಡ ಎಂದು ತೀವ್ರ ವಾಗ್ಧಾಳಿ ನಡೆಸಿದ ಅವರು, ಇತಿಹಾಸ ಅರಿಯದ ಸಿ.ಟಿ.ರವಿಯೊಬ್ಬ ಮಾನಸಿಕ ಅಸ್ವಸ್ಥ. ಅವರಿಗೆ ನಮ್ಮ ಸ್ವಂತ ಖರ್ಚಿನಲ್ಲಿಯೇ ಚಿಕಿತ್ಸೆ ನೀಡುತ್ತೇವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ವಿರುದ್ಧವೂ ಟೀಕಾಪ್ರಹಾರ ನಡೆಸಿದರು.

ಕರಪತ್ರ ಚಳುವಳಿ: ಸತ್ಯವನ್ನು ಕತ್ತಲೆಯಲ್ಲಿಟ್ಟು ಅಸತ್ಯವನ್ನು ವಿಜೃಂಭಿಸಲಾಗುತ್ತಿದ್ದು, ಪುರಾಣ ಎನ್ನುವ ಅಸತ್ಯವನ್ನು ಜಾಹೀರುಗೊಳಿಸುತ್ತಿದ್ದು ಈ ಬಗ್ಗೆ ದಸರಾಗೆ ಆಗಮಿಸುವ ದೇಶ ವಿದೇಶಿ ಪ್ರವಾಸಿಗರಿಗೆ ಕರೆ ಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಸಮಿತಿಯ ಮತ್ತೋರ್ವ ಪ್ರಮುಖರಾದ ಶಾಂತರಾಜು ಮಾತನಾಡಿ, ಹಿಂದೂ ದೇವಾಲಯಗಳಲ್ಲಿ ಕಟ್ಟುಪಾಡಿರುವ ಬಗ್ಗೆ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ತಿಳಿಸಿದ್ದು, ಆ ಕಟ್ಟುಪಾಡುಗಳ್ಯಾವುದೆಂದು ಸ್ಪಷ್ಟಪಡಿಸಲಿ. ಮಹಿಷಾ ಹಾಗೂ ಚಾಮುಂಡಿ ದಸರಾ ಬಗ್ಗೆ ಚರ್ಚೆಯಾಗಲಿ ಎಂದು ಸಚಿವ ಸೋಮಣ್ಣನವರ ಮನೆ ಬಾಗಿಲಿಗೇನು ಭಿಕ್ಷೆ ಬೇಡಲು ಹೋಗಿರಲಿಲ್ಲ. ಆದರೂ ನಮ್ಮ ಬಗ್ಗೆ ತೀವ್ರ ನಿಕೃಷ್ಟವಾಗಿ ಮಾತನಾಡಿ, ಅ.8ರ ನಂತರ ಚರ್ಚಿಸೋಣ ಎಂದಿದ್ದು, ಹಾಗಾದರೆ ಚರ್ಚೆ ನಂತರವೇ ದಸರಾ ಆಚರಿಸಲಿ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಸೋಸಲೆ ಸಿದ್ದರಾಜು, ಅಶೋಕ್, ಪುನೀತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News