ಪ್ರತಾಪ್ ಸಿಂಹ ವಿರುದ್ಧ ಸುಮೊಟೊ ಅಡಿ ಪ್ರಕರಣ ದಾಖಲಿಸಿ: ಪೊಲೀಸ್ ನಿರ್ದೇಶಕರಿಗೆ ಪತ್ರ

Update: 2019-09-30 16:53 GMT
ಎನ್.ಭಾಸ್ಕರ್

ಮೈಸೂರು,ಸೆ.30: ಸಾರ್ವಜನಿಕವಾಗಿ ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಷಂಡ ಎಂಬ ಪದ ಬಳಸಿರುವ ಹಾಗೂ ಮಹಿಷ ದಸರಾ ಆಚರಣೆಗೆ ಅಡ್ಡಪಡಿಸಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬೇಕು ಎಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎನ್.ಭಾಸ್ಕರ್ ಪೊಲೀಸ್ ನಿರ್ದೇಕರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಅವರು, 'ಕಳೆದ ಏಳು ವರ್ಷಗಳಿಂದಲೂ ಯಾವುದೇ ರೀತಿಯಲ್ಲೂ ತೊಂದರೆಯಾಗದ ರೀತಿಯಲ್ಲಿ ಮೂಲನಿವಾಸಿಗಳಾದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮಹಿಷ ದಸರಾ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದರು. ಆದರೆ ಈ ಬಾರಿ ಸಂಸದ ಪ್ರತಾಪ್ ಸಿಂಹ ಇದಕ್ಕೆ ಅಡ್ಡಿಪಡಿಸಿದ್ದು, ಚಾಮುಂಡಿ ಬೆಟ್ಟದಲ್ಲಿ ಅ.26 ರಂದು ಮಹಿಷ ದಸರಾ ಆಚರಣೆಗೆ ಹಾಕಲಾಗುತ್ತಿದ್ದ ವೇದಿಕೆ ನೋಡಿ ಕೆಂಡಮಂಡಲರಾದ ಸಂಸದರು ಪೊಲೀಸ್ ಅಧಿಕಾರಿಗಳನ್ನು ಕರೆದು 'ಆಯುಕ್ತರಿಂದ ಇಂತಹ ಷಂಡತನ ನಿರೀಕ್ಷಿಸಿರಲಿಲ್ಲ' ಎಂಬ ಪದವನ್ನು ಬಳಸಿದ್ದಾರೆ.

ಓರ್ವ ಜವಾಬ್ದಾರಿಯುತ ಸಂಸದನಾದ ಈತನಿಗೆ ವಿವೇಚನೆಯೇ ಇಲ್ಲ, ಹುಣಸೂರಿನಲ್ಲಿ ಹನುಮ ಜಯಂತಿ ಆಚರಣೆ ವೇಳೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪೊಲೀಸರ ಮೇಲೆ ಕಾರು ಹತ್ತಿಸಿ ತನ್ನ ದರ್ಪ ಮತ್ತು ಅಧಿಕಾರದ ಮದ ತೋರಿಸಿದ್ದ. ದೇಶದಲ್ಲಿ ಶಾಂತಿ ಕಾಪಾಡಲು ಇರುವ ಪೊಲೀಸರಿಗೆ ಅಂತಹ ಪದ ಬಳಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಈ ದೃಶ್ಯಗಳು ಎಲ್ಲಾ ಮಾಧ್ಯಮಗಳಲ್ಲೂ ಬಿತ್ತರವಾಗಿದೆ. ಹಾಗಾಗಿ ಈತನ ವಿರುದ್ಧ ಸುಮೊಟೊ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News