ಬೈಕ್ ಚಾಲನೆ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದರೆ ಪೊಲೀಸರಿಗೆ ಬೀಳಲಿದೆ ದಂಡ !

Update: 2019-09-30 17:08 GMT

ಬೆಂಗಳೂರು, ಸೆ.30: ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯು ಬೈಕ್ ಚಲಾಯಿಸುವ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದರೆ ಸಂಚಾರ ನಿಯಮ ಉಲ್ಲಂಘನೆ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ .

ದ್ವಿಚಕ್ರ ಚಲಾಯಿಸುವ ಸಂದರ್ಭದಲ್ಲಿ ರಸ್ತೆ ಬದಿ ಎದುರಾಗುವ ಹಿರಿಯ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಸೆಲ್ಯೂಟ್ ಮಾಡದಂತೆ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಒಂದು ವೇಳೆ ಸೆಲ್ಯೂಟ್ ಮಾಡಿದರೆ ಮೋಟರ್ ವಾಹನ ಕಾಯ್ದೆ ಅಡಿ ನಿರ್ಲಕ್ಷ್ಯ ಚಾಲನೆಯಡಿ ಒಂದು ಸಾವಿರ ದಂಡ ವಿಧಿಸಲಿದ್ದಾರೆ. ಅಲ್ಲದೆ, ಮೂರು ತಿಂಗಳು ಡಿಎಲ್ ಅಮಾನತು ಮಾಡಲು ನಿರ್ಧರಿಸಲಾಗಿದೆ.

ಈ ನಿರ್ಧಾರಕ್ಕೆ ಕಾರಣ..?: ವಾಹನ ಚಾಲನೆ ಮಾಡುವ ವೇಳೆ ಸೆಲ್ಯೂಟ್ ಹೊಡೆದರೆ ದ್ವಿಚಕ್ರ ವಾಹನ ಆಯತಪ್ಪಿ ಅಪಘಾತವಾಗುವ ಸಂಭವವಿದೆ. ಆದುದರಿಂದಾಗಿ ಕರ್ತವ್ಯ ನಿರತ ಪೊಲೀಸರು ಅಪಘಾತದಲ್ಲಿ ಸಾವನ್ನಪ್ಪಿದರೆ, ಇಲಾಖೆ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಸೆಲ್ಯೂಟ್ ಹೊಡೆಯದಂತೆ ಸೂಚಿಸಲಾಗಿದೆ.

ಪೊಲೀಸರೇ ಸಂಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಹೀಗಾಗಿ, ನಿಯಮ ಪಾಲಿಸುವುದು ಎಲ್ಲರ ಕರ್ತವ್ಯ. ನಿಯಮ ಉಲ್ಲಂಘಿಸಿದರೆ ಎಲ್ಲರಿಗೂ ಒಂದೇ ಕಾನೂನು. ಮೋಟಾರು ವಾಹನ ಕಾಯ್ದೆ ಪೊಲೀಸರಿಗೂ ಅನ್ವಯಿಸಲಿದೆ ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News