ನೂತನ ಮಧುಗಿರಿ ಜಿಲ್ಲೆ ರಚನೆಗೆ ಡಾ.ಜಿ.ಪರಮೇಶ್ವರ್ ಆಗ್ರಹ

Update: 2019-09-30 17:19 GMT

ಬೆಂಗಳೂರು, ಸೆ.30: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಭೌಗೋಳಿಕವಾಗಿ ಹೆಚ್ಚಿನ ವಿಸ್ತಾರವನ್ನು ಹೊಂದಿದ್ದು, ಪ್ರತ್ಯೇಕವಾಗಿ ನೂತನ ಜಿಲ್ಲೆಯನ್ನಾಗಿ ಘೊಷಣೆ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.

ಮಧುಗಿರಿ ಕೇಂದ್ರ ಸ್ಥಾನದಲ್ಲಿ ಲೋಕೋಪಯೋಗಿ, ಜಿಲ್ಲಾ ಪಂಚಾಯತ್, ಕೆಇಬಿ, ಡಿವೈಎಸ್ಪಿ, ಎತ್ತಿನಹೊಳೆ ಇನ್ನಿತರ ಇಲಾಖೆಗಳ ಉಪ ವಿಭಾಗಗಳು, ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯ ನೆರೆಯ ತಾಲೂಕುಗಳಾದ ಪಾವಗಡ, ಕೊರಟಗೆರೆ ಮತ್ತು ಶಿರಾ ತಾಲೂಕುಗಳಿಗೆ ಕೃಷಿಯೋತ್ಪನ್ನ ಮತ್ತು ವಾಣಿಜ್ಯೋತ್ಪನ್ನಗಳ ಮಾರುಕಟ್ಟೆಗೆ ಕೇಂದ್ರ ಸ್ಥಾನವಾಗಿದೆ. ಮಧುಗಿರಿಯು ಎಲ್ಲ ಹಂತದಲ್ಲಿಯೂ ಜಿಲ್ಲೆಯಾಗಿ ಪರಿವರ್ತನೆ ಹೊಂದಲು ಅರ್ಹತೆ ಹೊಂದಿದೆ ಎಂದು ಪರಮೇಶ್ವರ್ ಪ್ರತಿಪಾದಿಸಿದ್ದಾರೆ.

ಮಧುಗಿರಿಯನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿಯನ್ನು ಮಧುಗಿರಿ, ಪಾವಗಡ, ಕೊರಟಗೆರೆ ಮತ್ತು ಶಿರಾ ಕಂದಾಯ ತಾಲೂಕುಗಳನ್ನು ಒಟ್ಟುಗೂಡಿಸಿ, ಪ್ರತ್ಯೇಕವಾಗಿ ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News