×
Ad

ಏರ್ ಶೋ ಪಾರ್ಕಿಂಗ್‌ನಲ್ಲಿ ಬೆಂಕಿ ಅನಾಹುತ: ಕ್ರಮದ ಕುರಿತು ವರದಿಗೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಪಿಐಎಲ್

Update: 2019-09-30 23:01 IST
ಫೈಲ್ ಚಿತ್ರ

ಬೆಂಗಳೂರು, ಸೆ.30: ಯಲಹಂಕದ ಏರೋ ಇಂಡಿಯಾದ ಡೊಮೆಸ್ಟಿಕ್ ಪಾರ್ಕಿಂಗ್ ಪ್ರದೇಶದಲ್ಲಿ ಫೆ.23ರಂದು ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ವರದಿ ನೀಡಲು ಕೇಂದ್ರ, ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಲು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಇನ್ನಷ್ಟೇ ಅರ್ಜಿ ವಿಚಾರಣೆಗೆ ಬರಬೇಕಿದೆ. 

ಈ ಕುರಿತು ನಗರದ ನಿವಾಸಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ, ವಕೀಲೆ ಗೀತಾ ಮಿಶ್ರಾ ಹೈಕೋರ್ಟ್‌ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ. ಏರೋ ಇಂಡಿಯಾದ ಸಂದರ್ಭದಲ್ಲಿ ನಡೆದ ಅಗ್ನಿ ಅವಘಡದ ತನಿಖೆಗೆ ಕೋರ್ಟ್ ವಿಚಾರಣಾ ಕಾಯ್ದೆಯಡಿ ನ್ಯಾಯಾಂಗ ಆಯೋಗವನ್ನು ರಚಿಸಬೇಕು. ಹಾಗೂ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ವರದಿ ನೀಡಲು ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ಅರ್ಜಿಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ, ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಫೆ.23ರಂದು ಬೆಂಗಳೂರು ಏರ್ ಶೋ ಸಂದರ್ಭದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಸುಮಾರು 400ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿದ್ದವು. ಯಾರೋ ಕಿಡಿಗೇಡಿಗಳು ಧೂಮಪಾನ ಮಾಡಿ ಕಡ್ಡಿ ಬಿಸಾಕಿದ್ದರಿಂದ ಅದು ಒಣ ಹುಲ್ಲಿನ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿತ್ತು. ಆದರೆ, ಯಾವುದೆ ನಿಖರವಾದ ಕಾರಣ ತಿಳಿದಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News