ಬಂಡೀಪುರ ವ್ಯಾಪ್ತಿಯಲ್ಲಿ ಮುಕ್ತ ಸಂಚಾರಕ್ಕೆ ಆಗ್ರಹಿಸಿ ಪಾದಯಾತ್ರೆ

Update: 2019-09-30 18:01 GMT

ಚಾಮರಾಜನಗರ, ಸೆ.30: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಹನ ಸಂಚಾರ ಮುಕ್ತ ಗೊಳಿಸುವಂತೆ ಅಗ್ರಹಿಸಿ ಕೇರಳದ ಸುಲ್ತಾನ್ ಬತ್ತೇರಿಯಿಂದ ಕರ್ನಾಟಕ ಗಡಿ ತನಕ ಬೃಹತ್ ಪಾದಯಾತ್ರೆ ನಡೆಯಿತು.

ಕರ್ನಾಟಕ ಕೇರಳ ರಾಜ್ಯಕ್ಕೆ ಹೊಂದಿಕೊಂಡಂತಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಲ್ತಾನ್ ಬತ್ತೇರಿ ಮಾರ್ಗದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ರಾತ್ರಿ ವೇಳೆಯ ಸಂಚಾರವನ್ನು ನಿಷೇಧ ಮಾಡಲಾಗಿತ್ತು. ಇದರಿಂದ ಕೇರಳದ ಜನತೆಯ ಮೇಲೆ ಭಾರಿ ಪ್ರಮಾಣದ ಪರಿಣಾಮ ಬೀರಿದ್ದು, ಈಗಲಾದರೂ ರಾತ್ರಿ ವೇಳೆಯ ವಾಹನ ಸಂಚಾರ ಮುಕ್ತಗೊಳಿಸುವಂತೆ ಆಗ್ರಹಿಸಿ ಸುಲ್ತಾನ್ ಬತ್ತೇರಿಯಿಂದ ಪಾದಯಾತ್ರೆ ನಡೆಯಿತು.

ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡು ಕ್ಷೇತ್ರದ ಸುಮಾರು ಐದು ಸಾವಿರ ಮಂದಿ ಸೋಮವಾರ ಬೆಳಗ್ಗೆ ಸುಲ್ತಾನ್ ಬತ್ತೇರಿಯಿಂದ ಪಾದಯಾತ್ರೆ ಮೂಲಕ ಬಂಡೀಪುರ ರಾತ್ರಿ ವಾಹನ ಸಂಚಾರ ತೆರವುಗಳಿಸುವಂತೆ ಆಗ್ರಹಿಸಿದರು.

ಸುಲ್ತಾನ್ ಬತ್ತೇರಿಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳೂ ಪಾದಯಾತ್ರೆಯಲ್ಲಿ ಇದ್ದರು. ಸುಮಾರು 22 ಕಿಲೋ ಮೀಟರ್ ಪಾದಯಾತ್ರೆಯು ಕರ್ನಾಟಕದ ಮೂಲೆಹೊಳೆ ಚೆಕ್ ಪೋಸ್ಟ್ ತನಕ ಆಗಮಿಸಿತು.

ದಿನಕ್ಕೊಂದು ಮಾದರಿ ಪ್ರತಿಭಟನೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕೇರಳ ರಾಜ್ಯಕ್ಕೆ ಸಂಪರ್ಕ ಹೊಂದುವ ರಸ್ತೆಯ ಮುಕ್ತ ಸಂಚಾರಕ್ಕೆ ಆಗ್ರಹಿಸಿ ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಮುಷ್ಕರ ದಿನಕ್ಕೊಂದು ಮಾದರಿಯಲ್ಲಿ ನಡೆಸಲು ತಿರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಮೊದಲನೇ ಹಂತವಾಗಿ ಸುಲ್ತಾನ್ ಬತ್ತೇರಿಯಲ್ಲಿ ಧರಣಿ, ಅಮರಣಾಂತ ಉಪವಾಸ, ಪಾದಯಾತ್ರೆ, ಅರೆಬೆತ್ತಲೆ ಮೆರವಣಿಗೆ ಹೀಗೆ ಹಲವಾರು ಮಾದರಿಯಲ್ಲಿ ಹೋರಾಟವನ್ನು ಹಮ್ಮಿಕೊಂಡಿರುವ ಕೇರಳಿಗರು, ಕೇಂದ್ರ ಸರ್ಕಾರವು ಬಂಡೀಪುರ ವ್ಯಾಪ್ತಿಯ ರಸ್ತೆ ಮಾರ್ಗವನ್ನು ಮುಕ್ತವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ಬೆಂಬಲ: ಕೇರಳದ ವೈನಾಡು ಲೋಕಸಭಾ ಸದಸ್ಯ ರಾಹುಲ್ ಗಾಂಧಿಯವರು ಕೇರಳಿಗರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ರಾತ್ರಿ ವೇಳೆ ನಿಷೇಧವಾಗಿರುವ ರಸ್ತೆ ಸಂಚಾರವನ್ನು ಮತ್ತೆ ಆರಂಭಿಸಲು ಅಗತ್ಯ ಕ್ರಮ ವಹಿಸಲು ಒತ್ತಾಯಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಅಲ್ಲಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬೆಂಬಲ ನೀಡಿ ಹೋರಾಟ ನಡೆಸುವಂತೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News