ಯುವ ಪ್ರತಿಭೆಗಳಿಗೆ ಯುವ ದಸರಾ ಉತ್ತಮ ವೇದಿಕೆ: ಪಿ.ವಿ.ಸಿಂಧು
ಮೈಸೂರು,ಅ.1: ಮೈಸೂರಿಗೆ ಇದೇ ಮೊದಲ ಬಾರಿಗೆ ಆಗಮಿಸಿದ್ದು, ತುಂಬಾ ಸಂತಸವಾಗುತ್ತದೆ. ಯುವ ದಸರಾ ಎಂದರೆ ಯುವ ಮನಸ್ಸುಗಳ ಹಬ್ಬ, ಯುವ ಪ್ರತಿಭೆಗಳಿಗೆ ಯುವ ದಸರಾ ಉತ್ತಮ ವೇದಿಕೆ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಯುವ ದಸರಾ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು ಮೈಸೂರು ಸ್ವಚ್ಛ ನಗರಿ, ಇಲ್ಲಿನ ಚಾಮುಂಡಿ ಬೆಟ್ಟ ತುಂಬ ಇಷ್ಟ. ಇಂತಹ ವೇದಿಕೆಗೆ ಆಹ್ವಾನಿಸಿದ ರಾಜ್ಯದ ಮುಖ್ಯಮಂತ್ರಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿ, ಮೈಸೂರು ದಸರಾದಲ್ಲಿ ಅತೀ ಹೆಚ್ಚು ಜನಪ್ರಿಯ ಹಾಗೂ ಯುವ ಮನಸ್ಸಿನ ಚಿಲುಮೆಯನ್ನು ಇಮ್ಮಡಿಗೊಳಿಸುವ ಅಪರೂಪದ ಕಾರ್ಯಕ್ರಮ ಯುವ ದಸರಾ. ಈ ಕಾರ್ಯಕ್ರಮಕ್ಕೆ ಅಪಾರ ಯುವಕ ಯುವತಿಯರು ಭಾಗವಹಿಸುವರು. ಇದರಿಂದ ದಸರಾ ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.
ಖ್ಯಾತ ಬಾಲಿವುಡ್ ಗಾಯಕ ಗುರು ರಾಂಧವ ಹಲವಾರು ಹಿಂದಿ ಗೀತೆಗಳನ್ನು ಹಾಡುವ ಮೂಲಕ ಮೈಸೂರಿಗರ ಹೃದಯ ಗೆದ್ದರು. ಖ್ಯಾತ ಚಲನಚಿತ್ರ ನಿರ್ದೇಶಕ ನಾಗಶೇಖರ್ ಅವರ ತಂಡದಿಂದ ಕನ್ನಡ ಚಿತ್ರರಂಗದ ದಿಗ್ಗಜರಿಗೆ ನಮನ ಸಲ್ಲಿಸುವ ಸಲುವಾಗಿ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಹಾಗೂ ಶಂಕರ್ ನಾಗ್ ಅವರ ನೆನಪಿನ ಹಾಡುಗಳ ಮೂಲಕ 'ಕೇಳದೆ ನಿಮಗೀಗ' ವಿಶೇಷ ಕಾರ್ಯಕ್ರಮದಲ್ಲಿ ಗಾಯಕಿ ಶಮಿಕಾ ಮಲ್ನಾಡ್ ಅವರು ಹಲವಾರು ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಯುವ ಸಂಭ್ರಮದಿಂದ ಆಯ್ಕೆಯಾಗಿದ್ದ ನಂಜನಗೂಡಿನ ನೂಪುರ ನೃತ್ಯ ಶಾಲೆ ಅವರಿಂದ ನೃತ್ಯ ಕಾರ್ಯಕ್ರಮ, ಯುವರಾಜ ಕಾಲೇಜಿನ ರತೀಶ್ ನೃತ್ಯ ನಿರ್ದೇಶನದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕುರಿತು ನೃತ್ಯ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ದಿವ್ಯರಾಂ ಟಾಕೀಸ್ ಅವರಿಂದ ಇಲ್ಯುಮಿನಿಟಿ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಮ್, ಶಾಸಕರಾದ ಎಲ್.ನಾಗೇಂದ್ರ, ಕೆ.ಮಹದೇವ್, ಯುವ ದಸರಾ ಉಪ ಸಮಿತಿ ಅಧ್ಯಕ್ಷ ಗೋಕುಲ್ ಗೋವರ್ಧನ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.