ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ: ಪ್ರಸನ್ನಾನಂದಪುರಿ ಸ್ವಾಮೀಜಿ

Update: 2019-10-01 18:07 GMT

ಬಾಗಲಕೋಟೆ, ಅ.1: ವಾಲ್ಮೀಕಿ ಸಮುದಾಯವನ್ನು ಬಿಜೆಪಿ ಅವರು ಬರೀ ವೋಟ್ ಬ್ಯಾಂಕ್ ಮಾಡಿಕೊಳ್ಳದೇ, ಭರವಸೆ ನೀಡಿದಂತೆ ಸಚಿವ ಬಿ.ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ರಾಮುಲುಗೆ ಡಿಸಿಎಂ ಹುದ್ದೆಯನ್ನು ನೀಡದೆ, ಚುನಾವಣೆಯಲ್ಲಿ ಸೋತವರನ್ನು ಡಿಸಿಎಂ ಮಾಡಿದ್ದಾರೆ. ರಾಮುಲುಗೆ ಡಿಸಿಎಂ ಹುದ್ದೆ ನೀಡದಿದ್ದರೆ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ವಾಲ್ಮೀಕಿ ಜನಾಂಗದವರು 4ನೆ ಅತಿದೊಡ್ಡ ಸಮುದಾಯವಾಗಿದೆ. ಉಪ ಚುನಾವಣೆ ನಡೆಯುವ ಮುನ್ನ ಸಂಪುಟ ವಿಸ್ತರಣೆ ಮಾಡಿ ವಾಲ್ಮೀಕಿ ಜನಾಂಗದವರೊಬ್ಬರಿಗೆ ಡಿಸಿಎಂ ಸ್ಥಾನ ನೀಡಿದರೆ ಸಮುದಾಯಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಂಡತ್ತಾಗುತ್ತದೆ ಎಂದು ಹೇಳಿದ್ದಾರೆ.

ವಾಲ್ಮೀಕಿ ಸಮುದಾಯದವರನ್ನು ಡಿಸಿಎಂ ಮಾಡುವುದು, ವಾಲ್ಮೀಕಿ ಜಯಂತಿ ಘೋಷಣೆ, ವಾಲ್ಮೀಕಿ ಜನಾಂಗಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ಸಿಎಂ ಬಿಎಸ್‌ವೈ ಅವರ ಬಳಿ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. ಈ ಮನವಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News