ಕೇಂದ್ರದಿಂದ ಶೀಘ್ರ ಅತಿವೃಷ್ಟಿ ಪರಿಹಾರ ಬಿಡುಗಡೆ: ಸಂಸದೆ ಶೋಭಾ ಕರಂದ್ಲಾಜೆ

Update: 2019-10-01 18:15 GMT

ಚಿಕ್ಕಮಗಳೂರು, ಅ.1: ದೇಶದ ಹಲವು ರಾಜ್ಯಗಳಲ್ಲಿ ಅತಿವೃಷ್ಟಿಯಾಗಿದೆ. ಕೇಂದ್ರ ಸರಕಾರ ಪ್ರತೀ ರಾಜ್ಯಕ್ಕೂ ಅತಿವೃಷ್ಟಿ ಪರಿಶೀಲನಾ ತಂಡವನ್ನು ಕಳಿಸಿ ಪರಿಶೀಲಲನೆ ನಡೆಸುತ್ತಿದೆ. ಕೇಂದ್ರ ಸರಕಾರ ಶೀಘ್ರ ಅತಿವೃಷ್ಟಿ ಪರಿಹಾರ ಅನುದಾನ ಬಿಡುಗಡೆ ಮಾಡಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿ ಸಮೀಕ್ಷಾ ತಂಡ ಎಲ್ಲ ರಾಜ್ಯಗಳಲ್ಲಿ ಅತಿವೃಷ್ಟಿ ಹಾನಿ ಪರಿಶೀಲಿಸಿ ಕೇಂದ್ರಕ್ಕೆ ವರದಿ ನೀಡಲಿದ್ದು, ವರದಿ ನೀಡಿದ ಕೂಡಲೆ ಎಲ್ಲ ರಾಜ್ಯಗಳಿಗೂ ಅಗತ್ಯಾನುಸಾರ ಅನುದಾನ ಬಿಡುಗಡೆ ಮಾಡಲಿದೆ ಎಂದ ಅವರು, 10-15 ದಿನಗಳಲ್ಲಿ ರಾಜ್ಯಕ್ಕೆ ಅತಿವೃಷ್ಟಿ ಪರಿಹಾರಕ್ಕೆ ಅಗತ್ಯ ಅನುದಾನ ಬಿಡುಗಡೆಯಾಗಲಿದೆ ಎಂದರು.

ಅತಿವೃಷ್ಟಿ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ತಾತ್ಕಾಲಿಕ ಪರಿಹಾರ ಕಾರ್ಯಗಳನ್ನು ರಾಜ್ಯ ಸರಕಾರ ಪ್ರಮಾಣಿಕವಾಗಿ ಕೈಗೊಂಡಿದೆ. ಸಂತ್ರಸ್ತರಿಗೆ ಅಗತ್ಯ ಪರಿಹಾರವನ್ನೂ ರಾಜ್ಯ ಸರಕಾರ ನೀಡಿದ್ದು, ಉಳಿದಿರುವುದು ಶಾಶ್ವತ ಪರಿಹಾರ ಕಾರ್ಯ ಮಾತ್ರ. ಅದಕ್ಕೂ ರಾಜ್ಯ ಸರಕಾರ ಸೂಕ್ತ ನಿರ್ದೇಶನಗಳನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿದೆ. ಪ್ರತಿ ವರ್ಷ ಅತಿವೃಷ್ಟಿಯಿಂದಾಗಿ ಸಮಸ್ಯೆಗೆ ಸಿಲುಕುವ ಗ್ರಾಮಗಳನ್ನು ಸ್ಥಳಾಂತರಿಸಬೇಕಿದೆ. ಅಂತಹ ಪ್ರದೇಶಗಳು ಉತ್ತರ ಕರ್ನಾಟಕದಲ್ಲಿಯೂ ಇದೆ. ಮಲೆನಾಡು ಭಾಗಗಳಲ್ಲಿಯೂ ಇದೆ. ಅಂತಹ ಪ್ರದೇಶಗಳಲ್ಲಿ ಸೂಕ್ತ ಸ್ಥಳವನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರಕಾರ ಈಗಾಗಲೆ ಆದೇಶ ನೀಡಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಹಲವು ರಸ್ತೆಗಳು, ಸೇತುವೆಗಳು ಹಾಳಾಗಿವೆ. ಇವುಗಳನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಲಾಗುವುದು. ಕೇಂದ್ರದಿಂದ ಅನುದಾನ ಬಿಡುಗಡೆಯಾದ ಕೂಡಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ಹಲವು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಅದಕ್ಕೆ ತಕ್ಕಂತೆ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವೇಗದ ರೈಲು ಓಡಿಸುವ ಕುರಿತು ಸಾರ್ವಜನಿಕರಿಂದ ಬೇಡಿಕೆ ಇತ್ತು. ಈ ಕುರಿತು ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸಲಾಗಿದೆ. ಅವರಿಗೆ ವೇಗದ ರೈಲಿನ ಅಗತ್ಯತೆ ಕುರಿತು ಮನದಟ್ಟು ಮಾಡಿಕೊಡಲಾಗಿದೆ. ಕೇಂದ್ರ ಸಚಿವರು ರೈಲು ಓಡಿಸಲು ಸಮ್ಮತಿಸಿದ್ದಾರೆ. ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗ ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಕೇಂದ್ರ ಸರಕಾರ ಬಂದಿದ್ದು, ಜನರಿಗೆ ಅನುಕೂಲವಾಗುವಂತೆ ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗಕ್ಕೆ ಅನುಮತಿ ದೊರೆತಿದೆ. ಶೀಘ್ರದಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ.
- ಶೋಭಾ ಕರಂದ್ಲಾಜೆ, ಸಂಸದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News