ಹಾರಿಕೆ ಸುದ್ದಿ ಹರಡಿಸುವವರು ದೇಶದ್ರೋಹಿಗಳು: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸದಾನಂದಗೌಡ ಪರೋಕ್ಷ ವಾಗ್ದಾಳಿ

Update: 2019-10-02 14:56 GMT

ಬೆಂಗಳೂರು, ಅ.2: ಹಾರಿಕೆ ಸುದ್ದಿ ಹರಡಿಸುವವರು ದೇಶದ್ರೋಹಿಗಳು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಇವರೆಲ್ಲ ಅದೇ ಬ್ರಾಂಡ್‌ಗೆ ಸೇರುತ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಅವರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪರೋಕ್ಷವಾಗಿ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸದಾನಂದಗೌಡ ಅವರು, "ಮಂತ್ರಿಗಿರಿ ಭಿಕ್ಷೆ ಹಾಕಿದ್ದು, ಮಂತ್ರಿಗಳು ಸುಮ್ಮನೆ ಕೂತಿದ್ದಾರೆ. 25 ಮಂದಿ ಸಂಸದರು ಏನು ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿ, ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟಬಹುದು ಎಂದು ಭಾವಿಸುವುದು ಸರಿಯಲ್ಲ. ಮಹಾತ್ಮ ಗಾಂಧೀಜಿ ಒಂದು ಮಾತು ಹೇಳಿದ್ದಾರೆ ‘ಹಾರಿಕೆಯ ಸುದ್ದಿಗಳನ್ನು ಹರಡಿಸುವವರು ದೇಶದ್ರೋಹಿ’ಗಳೆಂದು. ಪ್ರಾಯಶಃ ಇವರೆಲ್ಲ ಆ ಬ್ರಾಂಡ್‌ಗೆ ಬರುತ್ತಾರೆ. ಕೇವಲ ಭಾಷಣಗಳಿಂದ ಟ್ವೀಟ್‌ಗಳಿಂದ ಜನರನ್ನು ಪ್ರಚೋದಿಸುವುದು ಬೇಡ. ಇಂತಹ ಮಾತುಗಳು ಹಾಗೂ ಜನರ ಬಗ್ಗೆ ಬಹಳ ನೋವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆರೆ ಪರಿಹಾರದ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮಾಡಿದ ಟ್ವೀಟ್ ವೊಂದಕ್ಕೆ ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರದಿಂದ ನೆರೆ ಪರಿಹಾರ ದೊರಕದ ಬಗ್ಗೆ ಸಂಸದರನ್ನು ತರಾಟೆಗೆ ತೆಗೆದಿದ್ದ ಅವರು, ‘ಓ ಇವರು ಈಗ ಬಂದಿದ್ದಾರೆ. ಸದಾನಂದ ಗೌಡರೇ, ನೊಂದಿರುವ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾರ್ಷ್ಟ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೇ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ. ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬರದ ಪರಿಹಾರ ಯಾವ ಪುರುಷಾರ್ಥಕ್ಕೆ?’ ಎಂದು ಅವರು ಟ್ವೀಟ್‌ ಮೂಲಕ ಖಾರವಾಗಿ ಪ್ರಶ್ನಿಸಿದ್ದರು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಸದಾನಂದಗೌಡ ಅವರು, 'ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ' ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ 'ಹಾರಿಕೆ ಸುದ್ದಿ ಹರಡಿಸುವವರು ದೇಶದ್ರೋಹಿಗಳು' ಎಂದು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News