ಜಾತಿ ಜನಗಣತಿ ವರದಿ ತಿರಸ್ಕರಿಸುವ ಕುರಿತು ಚರ್ಚೆ: ಸಚಿವ ಜಗದೀಶ್ ಶೆಟ್ಟರ್

Update: 2019-10-02 15:33 GMT

ಹುಬ್ಬಳ್ಳಿ, ಅ 2: ರಾಜ್ಯದಲ್ಲಿ ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಲಾಭಕ್ಕಾಗಿ ಜಾತಿ ಜನಗಣತಿ ಮಾಡಿದ್ದಾರೆ, ವರದಿ ತಿರಸ್ಕರಿಸುವ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಮೂಲಕ ಉಪ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು, ಇದರಿಂದ ಸರಕಾರಕ್ಕೆ 190 ಕೋಟಿ ರೂ ನಷ್ಟವಾಗಿದೆ ಎಂದು ದೂರಿದರು.

ಜಾತಿ ಜನಗಣತಿ ವರದಿ ಕ್ಯಾಬಿನೆಟ್ ನಲ್ಲಿ ಮಂಡನೆಯಾಗಿಲ್ಲ. ತಿರಸ್ಕೃತವೂ ಆಗಿಲ್ಲ. ಜಾತಿ ಜನಗಣತಿಯನ್ನು ನಾವು ಈ ಹಿಂದೆಯೇ ವಿರೋಧ ಮಾಡಿದ್ದೆವು ಎಂದ ಅವರು, ವರದಿ ತಿರಸ್ಕರಿಸುವ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ನೆರೆ ಪರಿಹಾರದ ಬಗ್ಗೆ ರಾಜ್ಯದ ಜನರಲ್ಲಿ ಯಾವುದೇ ಗೊಂದಲಗಳಿಲ್ಲ. ಆದರೆ ಕಾಂಗ್ರೆಸ್ ನೆರೆ ವಿಷಯವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಬೊಕ್ಕಸದಲ್ಲಿ ಹಣವಿದ್ದು, ಅದರ ಮೂಲಕ ನೆರೆ ಸಂತ್ರಸ್ತರಿಗೆ 10 ಸಾವಿರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಮೈಸೂರು ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಹಾಗೆಯೇ ಕಿತ್ತೂರು ಉತ್ಸವ ಆಚರಣೆ ಯಾಕಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ನೆರೆಹಾವಳಿಯಿಂದ ಜನ ತತ್ತರಿಸಿ ಹೋಗಿದ್ದು, ಈ ಹಿನ್ನೆಲೆಯಲ್ಲಿ ಕಿತ್ತೂರ ಭಾಗದ ಜನರ ಅಭಿಪ್ರಾಯ ತೆಗೆದುಕೊಂಡೆ ಸರಳ ಕಿತ್ತೂರ ಉತ್ಸವ ಆಚರಣೆಗೆ ಮುಂದಾಗಿದ್ದೇವೆ. ಅಲ್ಲದೇ, ಸರಳವಾಗಿ ಉತ್ಸವವನ್ನು ಮಾಡಿ ಉಳಿದ ಹಣವನ್ನು ನೆರೆ ಸಂತ್ರಸ್ತರ ಪರಿಹಾರಕ್ಕೆ ಬಳಸಿಕೊಳ್ಳಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News