ಸಂಸದರೇನು ಭಿಕಾರಿಗಳಲ್ಲ, ಪುಕ್ಕಟ್ಟೆ ಬಿದ್ದಿಲ್ಲ: ಸಂಸದ ರಮೇಶ್ ಜಿಗಜಿಣಗಿ

Update: 2019-10-02 16:21 GMT

ವಿಜಯಪುರ, ಅ. 2: ಸಂಸದರು ಭಿಕಾರಿಗಳಲ್ಲ, ಲೋಕಸಭಾ ಸದಸ್ಯರೇನು ಪುಕ್ಕಟ್ಟೆ ಬಿದ್ದಿಲ್ಲ. ಮತ ಹಾಕಿದವರು, ಹಾಕದಿರುವವರೆಲ್ಲ ಸೇರಿ ನಮ್ಮನ್ನು ಬೈದರೆ ನಮ್ಮ ಗತಿಯೇನು? ಎಂದು ಸಂಸದ ರಮೇಶ್ ಜಿಗಜಿಣಗಿ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಸಂಸದರು ಸ್ವಾಭಿಮಾನಿಗಳಿದ್ದೇವೆ. ನಾವೂ ನಿಮ್ಮಂತೆ ಮನುಷ್ಯರೇ? ಪ್ರವಾಹ ಪರಿಹಾರ ಕಾರ್ಯ ಎಂದರೆ ನಮ್ಮ ಮನೆ ಕೆಲಸ ಇದ್ದಂತೆ ಎಂಬುದು ನಮಗೂ ಗೊತ್ತು. ಆ ಕಾರ್ಯದಲ್ಲೆ ನಾವು ಮಗ್ನರಾಗಿದ್ದೇವೆ ಎಂದು ಹೇಳಿದರು.

ನಮಗೇನು ದನಗಳು ಮತ ಹಾಕಿಲ್ಲ, ಜನಗಳೆ ಓಟು ಹಾಕಿದ್ದಾರಲ್ಲವೇ? ನೆರೆ ಸಂತ್ರಸ್ತರು ಕೊಂಚ ಸಮಾಧಾನದಿಂದ ಇರಬೇಕು. ನಾವೆಲ್ಲರೂ ಪರಿಹಾರಕ್ಕೆ ಪ್ರಯತ್ನ ನಡೆಸಿದ್ದೇವೆ ಎಂದ ಅವರು, ನಿನ್ನೆಯೆಷ್ಟೇ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಸದಾನಂದಗೌಡರ ಜತೆ ಮಾತನಾಡಿದ್ದೇನೆ ಎಂದರು.

ನಮ್ಮ ಮೇಲೆ ಸುಖಾಸುಮ್ಮನೆ ಅಪವಾದಗಳು ಬರುತ್ತಿವೆ. ಪ್ರಧಾನಿ ಮೋದಿ ಭೇಟಿಗೆ ಸಮಯ ತೆಗೆದುಕೊಂಡು ಎಲ್ಲ ಸಂಸದರ ನಿಯೋಗ ಹೋಗೋಣ ಎಂದು ಮನವಿ ಮಾಡಿದ್ದೇನೆ. ಪರಿಹಾರ ಕೊಡಬಾರದು ಎನ್ನುವುದು ಯಾರ ಅಭಿಪ್ರಾಯವೂ ಅಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ನೆರೆ ಪರಿಸ್ಥಿತಿಯ ವೇಳೆ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಖುದ್ದು ಪರಿಶೀಲನೆ ನಡೆಸಿದ್ದಾರೆ. ಆದರೂ, ಪ್ರಧಾನಿ ಏಕೆ ಸ್ಪಂದಿಸಿಲ್ಲ ಎಂಬುದು ಗೊತ್ತಿಲ್ಲ. ಕರ್ನಾಟಕ ರಾಜ್ಯಕ್ಕೂ ಪ್ರಧಾನಿ ಮೋದಿ ಸ್ಪಂದಿಸಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಕೇಂದ್ರದಿಂದ ಪರಿಹಾರ ರಾಜ್ಯಕ್ಕೆ ಕೊಡುವುದಿಲ್ಲ ಎಂದು ಹೇಳಿಲ್ಲ. ಸರಕಾರ ನಮ್ಮದೆ ಇದೆ. ಬಹಿರಂಗವಾಗಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಈಗಾಗಲೇ ಸಂಸದರೆಲ್ಲ ಸೇರಿ ಪ್ರಧಾನಿಗೆ ಹೇಳಿದ್ದೇವೆ. ಕೆಲವರು ಇದೇ ವಿಚಾರವನ್ನು ಅಪಪ್ರಚಾರ ಮಾಡಿ ದುರುಪಯೋಗ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News