ಪ್ರಪಾತಕ್ಕೆ ಉರುಳಿದ ಕಾರು: ಶಿಕ್ಷಕಿ ಹಾಗೂ ಮಗು ಪ್ರಾಣಪಾಯದಿಂದ ಪಾರು

Update: 2019-10-02 17:05 GMT

ಮಡಿಕೇರಿ, ಅ.2: ಗಾಂಧಿ ಜಯಂತಿ ಪ್ರಯುಕ್ತ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯೊಬ್ಬರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ 60ಅಡಿ ಆಳದ ಪ್ರಪಾತಕ್ಕೆ ಉರುಳಿದ ಘಟನೆ ವಿರಾಜಪೇಟೆ ಸಮೀಪದ ಅಂಬಟ್ಟಿ ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್ ಶಿಕ್ಷಕಿ ಹಾಗೂ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೋಣಿಕೊಪ್ಪದ ಕಾಲ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಕೌಶಿ ಕಾವೇರಮ್ಮ ಅವರು ತಮ್ಮ ಮಗು ಸೋಮಣ್ಣ ಎಂಬವರೊಂದಿಗೆ ಕಾರಿನಲ್ಲಿ ಬುಧವಾರ ಬೆಳಗ್ಗೆ 9.30ರ ಸುಮಾರಿಗೆ ಶಾಲೆಗೆ ತೆರಳುತ್ತಿದ್ದಾಗ ವೀರಾಜಪೇಟೆ ಕಾವೇರಿ ಕಾಲೇಜು ಬಳಿಯ ಅಂಬಟ್ಟಿ ಬಳಿ 60 ಅಡಿ ಆಳದ ಪ್ರಪಾತಕ್ಕೆ ಉರುಳಿದೆ.

ಅಲ್ಲಿನ ಕುಪ್ಪಂಡ ರಾಜೀವ್ ಕಾರ್ಯಪ್ಪ ಎಂಬವರ ತೋಟದೊಳಗೆ ಕಾರು ನುಗ್ಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕೌಶಿ ಕಾವೇರಮ್ಮ ಅವರ ಬೆನ್ನಿಗೆ ಪೆಟ್ಟಾಗಿದ್ದು, ಮಗುವಿಗೆ ಸಣ್ಣಪುಟ್ಟ ಗಾಯವಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಯಾಳುಗಳಿಗೆ ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವೀರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News