×
Ad

ಗಾಂಧಿ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಬೆಳಗಾವಿ ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ

Update: 2019-10-02 23:18 IST

ಬೆಳಗಾವಿ, ಅ.2: ಮಹಾತ್ಮ ಗಾಂಧೀಜಿ ಅವರ ವಿಚಾರಗಳನ್ನು, ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. 

ಬುಧವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ವಾತಂತ್ರ್ಯ ಸೈನಿಕ ಉತ್ತರಾಧಿಕಾರಿಗಳ ಸಂಘ, ಭಾರತೀಯ ಅಂಚೆ ಸೇವೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ಧೂರ್ ಶಾಸ್ತ್ರಿ ಅವರ 115ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಧೀಜಿಯವರ ಮಾರ್ಗಗಳಲ್ಲಿ ಪ್ರತಿಯೊಬ್ಬರು ಒಂದೊಂದು ಮಾರ್ಗಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಗಾಂಧೀಜಿಯವರ ಆದರ್ಶಗಳನ್ನು ಸರಿಯಾದ ರೀತಿಯಲ್ಲಿ ನಾವು ಪಾಲನೆ ಮಾಡಿದ್ದೇ ಆದರೆ ಅವರಿಗೆ ನಾವು ನಿಜವಾದ ಗೌರವವನ್ನು ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದರು.

ಉತ್ತರ ವಲಯದ ಆರಕ್ಷಕ ಮಹಾ ನಿರೀಕ್ಷಕ ಎಚ್.ಜಿ.ರಾಘವೇಂದ್ರ ಸುಹಾಸ್ ಮಾತನಾಡಿ, ಗಾಂಧೀಜಿ ಅವರ ಆಚಾರ ವಿಚಾರ, ತ್ಯಾಗ ಬಲಿದಾನ, ಜೀವನ ಶೈಲಿ, ಸತ್ಯ ಅಹಿಂಸೆ ಎಲ್ಲ ಯುಗಕ್ಕೂ ಮಾದರಿಯಾಗುತ್ತದೆ. ಅವರ ವಿಚಾರ ಹಾಗೂ ತತ್ವಾದರ್ಶಗಳು ದಿನದಿಂದ ದಿನಕ್ಕೆ ಪ್ರಬಲ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಪ್ರತಿಯೊಬ್ಬ ನಾಗರಿಕರು ಸಾಮಾಜಿಕ ಸಾಮರಸ್ಯ, ಸರಳ ಜೀವನ ನಡೆಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಇತಿಹಾಸವನ್ನು ಮೆಲುಕು ಹಾಕಿದಾಗ ಪ್ರಭುತ್ವವಾದ ಹೋರಾಟ ಮಾಡಿದವರು ಬಸವಣ್ಣ, ಅದೇ ರೀತಿಯಾಗಿ ಭಾರತದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಮೊದಲಿಗರು ಗಾಂಧೀಜಿಯವರು. ಗಾಂಧೀಜಿ ಅವರ ವಿಚಾರ, ನೀತಿ, ಆದರ್ಶಗಳನ್ನು ಹಾಗೂ ತತ್ವಗಳನ್ನು ಅಳವಡಿಸಿಕೊಳ್ಳುವಲ್ಲಿ ನಾವು ಸೋತಿದ್ದೇವೆ. ದಕ್ಷಿಣ ಆಫ್ರಿಕಾದ ಗುಲಾಮಗಿರಿ ಪದ್ದತಿಯನ್ನು ನಿರ್ಮೂಲನೆ ಮಾಡಿದ ಕೀರ್ತಿ ಗಾಂಧೀಜಿಗೆ ಸಲ್ಲುತ್ತದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ನಾಗರತ್ನಾ ಪರಾಂಡೆ ಮಾತನಾಡಿ, ಒಬ್ಬ ವ್ಯಕ್ತಿಯನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂದರೆ ಗಾಂಧೀಜಿ ಅವರ ಸರಳ ಜೀವನ, ಸಜ್ಜನಿಕೆ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬ ನಾಗರಿಕನೂ ಅಳವಡಿಸಿಕೊಳ್ಳಬೇಕು ಎಂದರು.

ಗಾಂಧೀಜಿ ಒಬ್ಬ ಚಿಂತಕ, ಕವಿ ಲೇಖಕ, ಬರಹಗಾರ, ಸಾಮಾಜಿಕ ಹೋರಾಟಗಾರರು ಹಾಗಾಗಿ ದೇಶದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಅವರ ವಿಚಾರಗಳನ್ನು ತಿಳಿದುಕೋಳ್ಳಬೇಕು ಎಂದು ಅವರು ಹೇಳಿದರು.

ವಿಶೇಷ ಅಂಚೆ ಲಕೊಟೆ ಬಿಡುಗಡೆ ಹಾಗೂ ಪಾಪು ಬಾಪು ಕಿರುಪುಸ್ತಕವನ್ನು ಹಿರಿಯ ಗಾಂಧಿವಾದಿ ಸದಾಶಿವ ಭೋಸಲೆ ಬಿಡುಗಡೆಗೊಳಿಸಿದರು. ಮಹಾತ್ಮ ಗಾಂಧೀಜಿ ಜೀವನ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಬಿ.ನಂದಿಹಳ್ಳಿ, ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೊಕೇಶ್‌ಕುಮಾರ್, ಪಾಲಿಕೆ ಆಯುಕ್ತ ಜಗದೀಶ್.ಕೆ.ಎಚ್, ಉಪ ವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ವಿದ್ಯಾವತಿ ಭಜಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News