ದೇಶದಲ್ಲಿ ಗಾಂಧಿ ತತ್ವಗಳಿಗಿಂತ ಗಾಂಧಿ ನೋಟಿಗೆ ಆದ್ಯತೆ ನೀಡಲಾಗುತ್ತಿದೆ: ಸಚಿವ ಸಿ.ಟಿ.ರವಿ

Update: 2019-10-02 18:09 GMT

ಚಿಕ್ಕಮಗಳೂರು, ಅ.2: ದೇಶದ ಆತ್ಮವಿಶ್ವಾಸ ಹಾಗೂ ಆತ್ಮಜಾಗೃತಿಗೆ ಗಾಂಧೀಜಿ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವ, ಆದರ್ಶಗಳಲ್ಲಿ ಕೆಲವು ಅಂಶಗಳನ್ನಾದರೂ ಅಳವಡಿಸಿಕೊಂಡು ನಮ್ಮನ್ನು ನಾವು ಗೆಲ್ಲಬಹುದಾಗಿದೆ. ಆದರೆ ಪ್ರಸಕ್ತ ದೇಶದಲ್ಲಿ ಗಾಂಧೀಜಿ ತತ್ವಗಳಿಗಿಂತ ಗಾಂಧೀಜಿ ನೋಟಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತಿದೆ ಎಂದು ಪ್ರವಾಸೋದ್ಯಮ, ಸಕ್ಕರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ವಿಷಾದಿಸಿದ್ದಾರೆ.

ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 150ನೇ ಗಾಂಧೀಜಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ರಾಷ್ಟ್ರಪಿತ ನೆನಪಿನಂಗಳದಲ್ಲಿ ಗಾಂಧೀಜಿ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ 115ನೇ ಜನ್ಮ ದಿನಾಚರಣೆ ಸಂದರ್ಭ ಮಹಾತ್ಮ ಗಾಂಧೀಜಿ ಅವರ ಪುತ್ಹಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಪರೋಪಕಾರ, ಅಹಿಂಸೆ, ಶಾಂತಿಯಂತಹ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮನ್ನು ನಾವು ಗೆಲ್ಲಬಹುದಲ್ಲದೇ ಭಾರತದ ಆತ್ಮ ಶಕ್ತಿಯ ಜಾಗೃತಿ ಮೂಡುತ್ತದೆ ಎಂದು ಹೇಳಿದರು.

ಗೋಪಾಲಕೃಷ್ಣ ಗೋಕಲೆ ಸೇರಿದಂತೆ ಲಾಲ್, ಬಾಲ್, ಪಾಲ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದರು. ಇದನ್ನು ಜನ ಸಾಮಾನ್ಯರ ಆಂದೋಲನವಾಗಿ ರೂಪಿಸಿದ ಕೀರ್ತಿ ಮಹಾತ್ಮ ಗಾಂಧೀಜಿಯವರಿಗೆ ಸಲ್ಲುತ್ತಿದೆ. ಗಾಂಧೀಜಿ ರೂಪಿಸಿದ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಚಲೇಜಾವ್ ಚಳವಳಿಯಂತಹ ಆಂದೋಲಗಳ ಮೂಲಕ ಅನುಸರಿಸಿದ ಮಾರ್ಗ ಮತ್ತು ಜನ ಸಾಮಾನ್ಯರನ್ನು ಮಾರ್ಪಾಡು ಮಾಡಲು ರೂಪಿಸಿದ ತಂತ್ರವನ್ನೇ ಸ್ವಾತಂತ್ರ್ಯ ಹೋರಾಟಕ್ಕೆ ಬ್ರಹ್ಮಾಸ್ತ್ರವಾಯಿತು ಎಂದು ಸ್ಮರಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಮಹಾತ್ಮಾ ಗಾಂಧೀಜಿ ಅವರು ತ್ಯಾಗ ಮತ್ತು ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಧಕ್ಕುವಂತೆ ಮಾಡಿದ್ದಾರೆ. ಆದರೆ ಸಮಾಜವನ್ನು ಛಿದ್ರ ಮಾಡುವಂತಹ ಹುನ್ನಾರ ನಡೆಸಿರುವ ಪಟ್ಟಭದ್ರಹಿತಾಶಕ್ತಿಗಳು ಯುವಜನರನ್ನು ಗಾಂಧೀಜಿ ಅವರನ್ನು ಖಳನಾಯಕನಂತೆ ಬಿಂಬಿಸುತ್ತಿವೆ. ಗಾಂಧೀಜಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ರೀತಿಯಲ್ಲಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾ ಯುವಜನರಲ್ಲಿ ಗಾಂಧೀಜಿ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂತವರು ನಿಜವಾದ ದೇಶದ್ರೋಹಿಗಳು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಮೂಗ್ತಿಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇವರೆಗೆ ನಡೆದ ಗಾಂಧಿ ನಡಿಗೆ ಸ್ವಚ್ಛತೆ ಕಡೆಗೆ ಎಂಬ ಘೋಷವಾಕ್ಯದ ಜಾಥಾ ಕಾರ್ಯಕ್ರಮಕ್ಕೆ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು. ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮ ಗಾಂಧೀಜಿಯವರ ಸಾಕ್ಷ್ಯಚಿತ್ರ ಹಾಗೂ ಜೀವನ ಚರಿತ್ರೆ ಕುರಿತ ಕಿರು ಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ಹಿರಿಯ ಪತ್ರಕರ್ತ ಹಾಗೂ ಪರಿಸರ ಚಿಂತಕ ಸ.ಗಿರಿಜಾಶಂಕರ್, ಮಹಾತ್ಮ ಗಾಂಧೀಜಿ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಗಯ್ಯ, ಜಿ.ಪಂ ಸದಸ್ಯ ಸೋಮಶೇಖರ್, ತಾಪಂ ಅಧ್ಯಕ್ಷ ಜಯಣ್ಣ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್ಪಿ ಹರೀಶ್ ಪಾಂಡೆ, ಜಿ.ಪಂ ಸಿಇಒ ಎಸ್.ಅಶ್ವತಿ, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಸ್ವಾಗತಿಸಿದರು. ನಾಗಶ್ರೀ ತ್ಯಾಗರಾಜ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸರ್ವಧರ್ಮಗಳ ಪ್ರಾರ್ಥನೆಯೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News