ಅನಂತಕುಮಾರ್ ಇದ್ದಿದ್ದರೆ ಕರ್ನಾಟಕಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ: ಬಿಜೆಪಿ ಶಾಸಕ ಯತ್ನಾಳ್

Update: 2019-10-03 13:08 GMT

ಬೆಂಗಳೂರು, ಅ. 3: ಹುಬ್ಬಳ್ಳಿಯಲ್ಲೊಬ್ಬರು, ಬೆಂಗಳೂರಿನಲ್ಲೊಬ್ಬರು ಕೂತು ಏನು ಮಾಡುತ್ತಿದ್ದೀರಾ. ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ನೆರೆ ಪರಿಹಾರ ತೆಗೆದುಕೊಂಡು ಬನ್ನಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೇಂದ್ರ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಮೂರು ಜನರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಆದರೆ, ಯಾರಿಗೂ ಪ್ರಧಾನಿ ಬಳಿ ಮಾತನಾಡುವಷ್ಟು ಧೈರ್ಯವಿಲ್ಲ. ಅನಂತ್ ಕುಮಾರ್ ಇದ್ದಿದ್ದರೆ ಕರ್ನಾಟಕಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಈಗಲಾದರೂ ಮೂವರಲ್ಲಿ ಒಬ್ಬರು ಕೇಂದ್ರ ರಾಜ್ಯದ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಿ ಎಂದರು.

ಸಂಸದನಾಗಿ ನಾನು ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ವಾಜಪೇಯಿ ಅಧಿಕಾರದ ಸಂದರ್ಭದಲ್ಲಿ ಅವರ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಿಕೊಂಡಿದ್ದೇನೆ. ಆದರೆ, ಇಂದಿನ ಹುಬ್ಬಳ್ಳಿಯ ಜೋಡೆತ್ತುಗಳಾದ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ಯಾಕೆ ಮಾಡಲಾಗುತ್ತಿಲ್ಲ. ಜಗದೀಶ್ ಶೆಟ್ಟರ್ ಮತ್ತು ಜೋಶಿ ಕೇಂದ್ರದಿಂದ ಪರಿಹಾರ ತರುವ ಜವಾಬ್ದಾರಿ ತೆಗೆದುಕೊಂಡರೆ, ನಾವೆಲ್ಲರೂ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಿದರು.

ಚಕ್ರವರ್ತಿ ಸೂಲಿಬೆಲೆ ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರ ಕೇಳುವುದರಲ್ಲಿ ತಪ್ಪೇನಿಲ್ಲ. ನಿಮ್ಮ ವೈಫಲ್ಯಗಳನ್ನು ಅವರ ಮೇಲೆ ಯಾಕೆ ಹಾಕುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು, ಸೂಲಿಬೆಲೆಯನ್ನು ಬೈಯುವ ಮೂಲಕ ನಿಮ್ಮ ಗೌರವವಷ್ಟೇ ಅಲ್ಲದೆ, ಪ್ರಧಾನಿ ಗೌರವವನ್ನು ಕಳೆಯಬೇಡಿ ಎಂದು ಕೇಂದ್ರ ಸಚಿವ ಸದಾನಂದಗೌಡಗೆ ತಿರುಗೇಟು ನೀಡಿದರು.

ರಾಜ್ಯದ ಸಂಸದರಿಗೆ, ಕೇಂದ್ರ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಇವರು ನಮಗೇನು ಭೇಟಿ ಮಾಡಿಸುತ್ತಾರೆ. ಅದು ಅಸಾಧ್ಯದ ಮಾತು.

-ಬಸನಗೌಡ ಪಾಟೀಲ ಯತ್ನಾಳ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News