ರೈತನ ಆತ್ಮಹತ್ಯೆಯ ಹೊಣೆಯನ್ನು ನೀವು ಹೊರುತ್ತೀರಾ:? ಪ್ರಧಾನಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Update: 2019-10-03 15:49 GMT

ಬೆಂಗಳೂರು, ಅ.3: ಪ್ರವಾಹದಿಂದ ಹಾನಿಯಾದ ಬೆಳೆಗೆ ಇನ್ನೂ ಸೂಕ್ತ ಪರಿಹಾರ ಸಿಗದಿದ್ದಕ್ಕೆ ಕಳಸ ಸಮೀಪದ ಎಸ್.ಕೆ.ಮೇಗಲ್ ಗ್ರಾಮದ ಕೃಷಿಕ ಚಂದ್ರೇಗೌಡ ಎಂಬವರು ಬುಧವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟರ್‌ನಲ್ಲಿ ವಾಗ್ದಾಳಿ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರೇ ರೈತನ ಆತ್ಮಹತ್ಯೆಗೆ ಕಾರಣ ನೆರೆಗೆ ಸ್ಪಂದಿಸದೆ, ಪರಿಹಾರ ನೀಡದೇ ಇರುವುದು. ಈ ಸಾವಿನ ಹೊಣೆಗಾರಿಕೆಯನ್ನು ಹೊರುವಿರೇನು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ನಿಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದ್ದೀರಿ, ಒಂದು ಕ್ಷಣವೂ ನೀವು ಅಧಿಕಾರದಲ್ಲಿ ಮುಂದುವರೆಯಲು ನಿಮಗೆ ನೈತಿಕತೆ ಇಲ್ಲ. ತಂತಿಯ ಮೇಲಿಂದ ಕೆಳಗಿಳಿದು ಮನೆಗೆ ನಡೆಯಿರಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ. ಆಪರೇಷನ್ ಕಮಲಕ್ಕೆ ರಾತ್ರೋರಾತ್ರಿ ಓರ್ವ ಶಾಸಕರಿಗೆ 40, 50 ಕೋಟಿ ರೂ.ಖರ್ಚು ಮಾಡಲು ಸಾಧ್ಯ. ನೆರೆ ಪರಿಹಾರ ನೀಡಲು 60 ದಿನಗಳು ಸಾಲದೇ? ಪ್ರಧಾನಿ ನರೇಂದ್ರ ಮೋದಿ ಫೇಕು(ಸುಳ್ಳು ಹೇಳುವ), ಮುಖ್ಯಮಂತ್ರಿ ಯಡಿಯೂರಪ್ಪ ವೀಕು(ದುರ್ಬಲ) ಎಂದು ಕಾಂಗ್ರೆಸ್ ಟೀಕಿಸಿದೆ.

ನೆರೆ ಪರಿಹಾರ ಸಿಗದೆ ಮತ್ತೋರ್ವ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕಾರಿ ಮತ್ತು ದುಃಖದಾಯಕ. ಕನಿಷ್ಠ ಆಹಾರ, ವಸತಿ ಸೌಲಭ್ಯವಿಲ್ಲದ ಸ್ಥಿತಿಗೆ ಸಂತ್ರಸ್ತರನ್ನು ತಳ್ಳಿರುವ ನರೇದ್ರ ಮೋದಿ ಸರಕಾರ ನಿಜಕ್ಕೂ ಜೀವಂತ ಇದೆಯೇ? ಪರಿಹಾರ ತರುವ ಸಾಮರ್ಥ್ಯ ಇಲ್ಲದ ಯಡಿಯೂರಪ್ಪ ಸರಕಾರ ಅಸ್ತಿತ್ವದಲ್ಲಿರುವುದರ ಪ್ರಯೋಜನವೇನು ಎಂದು ಕಾಂಗ್ರೆಸ್ ಮುಖಂಡ ಎ.ಎನ್.ನಟರಾಜ್‌ಗೌಡ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News