ಸಂಸದ ಪ್ರತಾಪ್ ಸಿಂಹನನ್ನು ಗಡಿಪಾರು ಮಾಡಿ: ಚೋರನಹಳ್ಳಿ ಶಿವಣ್ಣ

Update: 2019-10-03 16:53 GMT

ಮೈಸೂರು,ಅ.3: ಮಹಿಷ ದಸರಾಗೆ ಸಂಸದ ಪ್ರತಾಪ್ ಸಿಂಹ ಅಡ್ಡಿಪಡಿಸಿದ್ದಾರೆ ಹಾಗೂ 144ನೇ ಸೆಕ್ಷನ್ ಜಾರಿ ಮಾಡಿ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬಕ್ಕೆ ತಡೆ ನೀಡಿದೆ ಎಂದು ಆರೋಪಿಸಿ ಜಿಲ್ಲಾಡಳಿತದ ವಿರುದ್ಧ ದಸಂಸ ಸಂಘಟನೆಗಳ ಒಕ್ಕೂಟದ ವತಿಯಿಂದ ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ಪ್ರತಿಭಟನೆ ನಡೆಯಿತು.

ಜಯಪುರ ಗ್ರಾಮದ ನಾಡ ಕಚೇರಿ ಮುಂಭಾಗ ಗುರುವಾರ ಪ್ರತಿಭಟನಾಕಾರರು ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದು ಧಿಕ್ಕಾರ ಕೂಗಿದರು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತಾನಡಿ, ಸಂಸದ ಪ್ರತಾಪ್ ಸಿಂಹ ಓರ್ವ ಶಂಡ, ಮಹಿಷ ದಸರಾ ಆಚರಣೆ ವೇಳೆ ಏಕಾಏಕಿ ಅಲ್ಲಿ ವೇದಿಕೆ ನಿರ್ಮಾಣ ಮಾಡುತಿದ್ದ ಜಾಗಕ್ಕೆ ಹೋಗಿ ಅಲ್ಲಿನ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿ ವೇದಿಕೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾನೆ. ಅವನಿಗೆ ತಾಕತ್ತಿದ್ದರೆ ನಮ್ಮ ಎದುರಿಗೆ ಬಂದು ಮಾತನಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಷ ದಸರಾ ಆಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಒಮ್ಮೆ ನೀಡಿದ ಅನುಮತಿಯನ್ನು ವಾಪಸ್ ಪಡೆಯುವ ಹಕ್ಕು ಜಿಲ್ಲಾಡಳಿತಕ್ಕೆ ಇಲ್ಲ, ಸಂಸದ ಪ್ರತಾಪ್ ಸಿಂಹನ ಅಧಿಕಾರದ ದರ್ಪಕ್ಕೆ ಹೆದರಿ ಇವರು ನಮ್ಮ ಆಚರಣೆಗೆ ಅಡ್ಡಿಪಡಿಸಿದ್ದಾರೆ ಎಂದು ದೂರಿದರು.

ಸಂಸದ ಪ್ರತಾಪ್ ಸಿಂಹ ಧಾರ್ಮಿಕ ಆಚರಣೆ ಮತ್ತು ಮೂಲನಿವಾಸಿಗಳ ಭಾವನೆಗೆ ಧಕ್ಕೆ ಉಂಟುಮಾಡಿದ್ದಾರೆ. ದಸರಾದ ಯಾವುದೇ ಕಾರ್ಯಕ್ರಮಗಳಿಗೆ ಈತ ಭಾಗವಹಿಸದಂತೆ ಸರಕಾರ ಕ್ರಮಕೈಗೊಳ್ಳಬೇಕು. ಸರಕಾರಕ್ಕೆ ನಾಚಿಕೆ ಮಾನಮರ್ಯಾದೆ ಇದೆ ಎಂದಾದರೆ ಕೂಡಲೇ ಈತನನ್ನು ಗಡಿಪಾರು ಮಾಡಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ದಲಿತ ಮುಖಂಡರಾದ ಬೆಟ್ಟಯ್ಯ ಕೋಟೆ, ಮಾಜಿ ಮೇಯರ್ ಪುರುಷೋತ್ತಮ್, ಕೆ.ವಿ.ದೇವೇಂದ್ರ, ಯಡಕೋಳ ನಾಗರಾಜು, ಎಡೆದೊರೆ ಮಹದೇವಯ್ಯ, ಹಾರೋಹಳ್ಳೀ ನಟರಾಜ್, ಮುರುಡಗಳ್ಳಿ ಮಹದೇವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News