ಕುಡಿದ ಮತ್ತಿನಲ್ಲಿ ಕೊಲೆಗೈದ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2019-10-03 16:58 GMT

ಮೈಸೂರು,ಅ.3: ಮೊಬೈಲ್ ಕೊಡಲಿಲ್ಲವೆಂಬ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಖಾಸಗಿ ಕಾರ್ಖಾನೆಯ ಉದ್ಯೋಗಿಯನ್ನು ಇರಿದು ಕೊಲೆ ಮಾಡಿದ್ದ ಮೂವರು ಆರೋಪಿಗಳಿಗೆ ಮೈಸೂರಿನ ಎರಡನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೈಸೂರಿನ ಕೆ.ಆರ್ ಎಸ್ ರಸ್ತೆಯಲ್ಲಿರುವ ಮೊಗರಳ್ಳೊ ಮಂಟಿ ನಿವಾಸಿ ನಂದೀಶ, ವಿನಯ್ ಕುಮಾರ್ ಮತ್ತು ಮಂಡ್ಯದ ಮಂಜುನಾಥ್ ಶಿಕ್ಷೆಗೆ ಒಳಗಾದವರು. ಇವರು ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇ ಅಳಗುಂಡಿ ಗ್ರಾಮದ ಮಲ್ಲಪ್ಪ ಎಂಬವರ ಪುತ್ರ, ಹೆಬ್ಬಾಳಿನಲ್ಲಿ ಖಾಸಗಿ ಕಾರ್ಖಾನೆಯ ಉದ್ಯೋಗಿ ಬಸವರಾಜು ಮಲ್ಲಪ್ಪ ಅಳಗುಂಡಿ(32) ಎಂಬವರನ್ನು 2016ರ ಅಕ್ಟೋಬರ್ 17ರಂದು ರಾತ್ರಿ ಕೆಆರ್‍ಎಸ್ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದರ ಬಳಿ ಕೊಲೆಗೈದಿದ್ದರು. ಬಸವರಾಜು ಮೊಬೈಲ್ ನಲ್ಲಿ ಮಾತನಾಡುತ್ತ ನಿಂತಿದ್ದಾಗ ಮದ್ಯದ ನಶೆಯಲ್ಲಿದ್ದ ಮೂವರು ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದು, ಬಸವರಾಜು ವಿರೋಧ ವ್ಯಕ್ತಪಡಿಸಿದ್ದಕ್ಕೆ ಚಾಕುವಿನಿಂದ ಇರಿದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು ಎನ್ನಲಾಗಿದೆ. 

ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಇನ್ಸಪೆಕ್ಟರ್ ಸುನೀಲ್ ಕುಮಾರ್ ಮತ್ತು ಸಿಬ್ಬಂದಿಗಳು ಮೂರೇ ದಿನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರಲ್ಲದೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿ ತಲಾ ಹತ್ತು ಸಾವಿರ ರೂ.ದಂಡ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಅಭಿಯೋಜಕ ಹೆಚ್.ಡಿ.ಆನಂದ್ ಕುಮಾರ್ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News