ದಸರಾ ಪ್ರಯುಕ್ತ ಹಾಲು ಕರೆಯುವ ಸ್ಪರ್ಧೆ: 35.65 ಕೆಜಿ ಹಾಲು ನೀಡಿದ ಹಸು

Update: 2019-10-03 17:07 GMT

ಮೈಸೂರು,ಅ.3: ದಸರಾ ಹಾಲು ಕರೆಯುವ ಸ್ಪರ್ಧೆಯಲ್ಲಿ ಲಷ್ಕರ್ ಮೊಹಲ್ಲಾದ ಅನ್ವರ್ ಶರೀಪ್ ಅವರ ಕಪ್ಪು ಬಿಳುಪು ತಳಿಯ ಹಸು ಬರೊಬ್ಬರಿ 35 ಕೆ.ಜಿ 650ಗ್ರಾಂ ಹಾಲು ಕರೆಯುವ ಮೂಲಕ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಸಾಧಿಸಿ 50 ಸಾವಿರ ಬಹುಮಾನ ಪಡೆದುಕೊಂಡರು.

ನಗರ ಜೆ.ಕೆ ಮೈದಾನದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ರೈತ ದಸರಾ ಉಪ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಸಂಸದರಾದ ಪ್ರತಾಪ್ ಸಿಂಹ ಅವರು ಉದ್ಘಾಟಿಸಿದರು.

ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ 7 ಗೋವುಗಳು ಪಾಲ್ಗೊಂಡಿದ್ದವು. ಸ್ಪರ್ಧೆಯಲ್ಲಿದ್ದ ಲಷ್ಕರ್ ಮೊಹಲ್ಲಾದ ಅನ್ವರ ಷರೀಪ್ ಅವರ ಗೋವು ಬೆಳಗ್ಗೆ 19 ಹಾಗೂ ಸಂಜೆ 16 ಕೆಜಿ 650 ಗ್ರಾಂ ಹಾಲು ಕೊಡುವ ಮೂಲಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿತು.

ಬೆಂಗಳೂರು ಉತ್ತರದ ಕೆಂಗನಹಳ್ಳಿಯ ಸೌತಡ್ಕ ಗಣಪತಿ ಡೈರಿ ಫಾರಂನ ಹಸು ದಿನಕ್ಕೆ 34 ಕೆ.ಜಿ 650ಗ್ರಾಂ ಹಾಲು ನೀಡುವ ಮೂಲಕ ದ್ವಿತೀಯ ಸ್ಥಾನ ಗಳಿಸಿ 40 ಸಾವಿರ ಬಹುಮಾನ ಪಡೆಯಿತು. ಚನ್ನರಾಯಪಟ್ಟಣ ಜನಿವಾರದ ಸಂತೋಷ್ ವಿನೋದ್ ಅವರ ಹಸು 31 ಕೆ.ಜಿ 450ಗ್ರಾಂ ಹಾಲು ನೀಡಿ  30 ಸಾವಿರ ರೂ.ಗಳ ತೃತೀಯ ಬಹುಮಾನ ಪಡೆಯಿತು. ಬೆಂಗಳೂರಿನ ನೆಲಮಂಗಲದ ಚಂದನ್ ಬಿನ್ ಮುನಿರಾಜು ಅವರ ಹಸು 29 ಕೆ.ಜಿ 800 ಗ್ರಾಂ ಕರೆದು 10 ಸಾವಿರ ಸಮಾಧಾನಕರ ಬಹುಮಾನ ಪಡೆಯಿತು.

ಈ ಸಂದರ್ಭದಲ್ಲಿ ಮಹಾಪೌರರಾದ ಪುಷ್ಪಲತಾ ಜಗನ್ನಾಥ್,ರೈತ ದಸರಾ ಉಪ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್,ಉಪವಿಶೇಷ ಅಧಿಕಾರಿ ಡಾ.ಕೃಷ್ಣರಾಜು, ಕಾರ್ಯಾಧ್ಯಕ್ಷ ಮಹಂತೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News