ಸೋಲಾರ್ ಪವರ್ ಪ್ಲಾಂಟ್ ನನ್ನದಲ್ಲ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

Update: 2019-10-03 17:15 GMT

ಬೆಳಗಾವಿ, ಅ.3: ಸೋಲಾರ್ ಪವರ್ ಪ್ಲಾಂಟ್ ನನ್ನದಲ್ಲ. ನನ್ನ ಹೆಸರಿನಲ್ಲಿ ಇದ್ದರೆ ಚಾಮುಂಡೇಶ್ವರಿ ದೇವಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ, ಅದನ್ನು ಸರಕಾರದ ಬೊಕ್ಕಸಕ್ಕೆ ಬರೆದುಕೊಡುತ್ತೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. 

ಗುರುವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಅವ್ಯವಹಾರದಲ್ಲಿ ತೊಡಗಿಲ್ಲ. ನನ್ನ ಮಾಲಕತ್ವದ ಹರ್ಷಾ ಶುಗರ್ಸ್ ಕಾರ್ಖಾನೆಯ ವ್ಯವಹಾರದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಕಾರ್ಖಾನೆಗೆ ಸಂಬಂಧಿಸಿದಂತೆ 120 ಕೋಟಿ ಅವ್ಯವಹಾರವಾಗಿದೆ ಎನ್ನಲಾದ ವಿಚಾರವು ಕೇವಲ ಆರೋಪ ಅಷ್ಟೇ. ಅದಕ್ಕೆ ಯಾವುದೇ ಆಧಾರ ಇಲ್ಲ ಎಂದರು.

ಕಾರ್ಖಾನೆಗೆ ಸಾಲ ನೀಡುವ ವೇಳೆ ಅಪೆಕ್ಸ್ ಬ್ಯಾಂಕ್ ಸಾಕಷ್ಟು ದಾಖಲೆಗಳನ್ನು ಪರಿಶೀಲಿಸುತ್ತದೆ. ಅದೇ ರೀತಿ ನಮ್ಮ ದಾಖಲೆಗಳನ್ನು ಪರಿಶೀಲಿಸಿ, ಸಮರ್ಪಕವಾಗಿರುವುದನ್ನು ಮನವರಿಕೆ ಮಾಡಿಕೊಂಡು ಸಾಲ ನೀಡಿದೆ. ಯಾವುದೇ ಅವ್ಯವಹಾರವಾಗಿಲ್ಲ ಎಂದು ಹೇಳಿದರು. ಆದಾಯ ತೆರಿಗೆ ಇಲಾಖೆ ಹಾಗೂ ತನಿಖಾ ಸಂಸ್ಥೆಗಳು ಸೂಕ್ತ ತನಿಖೆ ನಡೆಸುತ್ತವೆ ಎನ್ನುವ ವಿಶ್ವಾಸ ತಮಗಿದೆ. ಕಪೋಲಕಲ್ಪಿತ ಸುದ್ದಿಗಳಿಗೆ ನಾನು ಉತ್ತರಿಸಲು ಹೋಗುವುದಿಲ್ಲ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News