ದಸರಾ ಬಂದೋಬಸ್ತ್ ಗೆ ಬಂದ ಉ.ಕ. ಪೊಲೀಸರಿಂದ ಊಟಕ್ಕೆ ಪರದಾಟ: ಆರೋಪ

Update: 2019-10-03 17:44 GMT

ಮೈಸೂರು,ಅ.3: ದಸರಾ ಬಂದೋಬಸ್ತ್ ಗೆ ಬಂದಿರುವ ಪೊಲೀಸರು ಊಟಕ್ಕಾಗಿ ಯಾತನೆ ಪಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಜ್ಯದ ವಿವಿಧ ಕಡೆಗಳಿಂದ ಮೈಸೂರು ದಸರಾ ಬಂದೋಬಸ್ತ್ಗಾಗಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಸಾಕಷ್ಟು ಮಂದಿ ಉತ್ತರ ಕರ್ನಾಟಕ ಭಾಗದ ಪೊಲೀಸರು ಬಂದೋಬಸ್ತ್ಗಾಗಿ ಆಗಮಿಸಿದ್ದಾರೆ ಎನ್ನಲಾಗಿದೆ.

ಉತ್ತರ ಕರ್ನಾಟಕ ಭಾಗದ ಬೆಳಗಾಂ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಸೇರಿದಂತೆ ಅನೇಕ ಕಡೆಗಳಿಂದ ಪೊಲೀಸರು ಆಗಮಿಸಿದ್ದಾರೆ. ಅವರಿಗೆ ನಿತ್ಯ ದಿನ ಭತ್ಯೆ ಮತ್ತು ಸಂಚಾರ ಭತ್ಯೆಯನ್ನು ನೀಡಲಾಗುತ್ತದೆ. ಆದರೆ ಅವರು ದಿನದ ಊಟಕ್ಕೆ ಪರದಾಡುವಂತಾಗಿದೆ ಎಂದು ಆರೋಪಿಸಲಾಗಿದೆ.

'ಮೈಸೂರು ನಗರ ಪೊಲೀಸರು ಊಟಕ್ಕೇನು ಕೊರತೆ ಮಾಡಿಲ್ಲ, ನಿತ್ಯ ಅನ್ನ ಸಾಂಬಾರ್ ನೀಡುತ್ತಾರೆ. ಆದರೆ ಉತ್ತರ ಕರ್ನಾಟಕದ ಪೊಲೀಸರಿಗೆ ಇಲ್ಲಿನ ಊಟಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ದಿನ ನಿತ್ಯ ಜೋಳದ ರೊಟ್ಟಿ, ಚಪಾತಿ ತಿಂದು ಅಭ್ಯಾಸ ಆಗಿರುವ ಪೊಲೀಸರಿಗೆ ಇಲ್ಲಿನ ಅನ್ನ, ಸಾಂಬಾರ್ ಅಷ್ಟಾಗಿ ಹಿಡಿಸುತ್ತಿಲ್ಲ ಎನ್ನಲಾಗಿದೆ. 

ಬೆಳಗಾಂ ಮೂಲದ ಹೆಸರು ಹೇಳಲಿಚ್ಚಿಸದ ಸಹಾಯಕ ಪೊಲೀಸ್ ಉಪನಿರೀಕ್ಷಕರ ಪ್ರಕಾರ, ನಮಗೆ ತಂಗಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಇಲ್ಲಿನ ಊಟ ನಮಗೆ ಅಡ್ಜಸ್ಟ್ ಆಗುತಿಲ್ಲ, ಪ್ರತಿ ದಿನ ಅನ್ನ ಸಾಂಬಾರ್ ನೀಡಲಾಗುತ್ತದೆ. ಇದಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನಾವು ಉತ್ತರ ಕರ್ನಾಟಕದ ಊಟ ಎಲ್ಲಿ ಮಾಡುತ್ತಾರೊ ಆ ಹೋಟೆಲ್‍ಗೆ ಹೋಗಿ ಊಟ ಮಾಡುತ್ತಿದ್ದೇವೆ. ಹೋಟೆಲ್‍ಗೆ ಹೋಗಿ ಊಟ ಮಾಡಲು ತೊಂದರೆ ಇಲ್ಲ, ಆದರೆ ನಾವು ಕರ್ತವ್ಯದ ಮೇಲೆ ಇದ್ದಾಗ ಅದೇ ಹೋಟೆಲ್‍ಗೆ ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ, ಹಾಗಾಗಿ ನಮಗೆ ಊಟಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ಕಡೆ ಇಲ್ಲಿನ ಪೊಲೀಸರು ಬಂದೋಬಸ್ತ್ಗೆ ಬಂದರೆ ಇವರಿಗೆ ಹೊಂದಿಕೊಳ್ಳುವಂತಹ ಊಟವನ್ನು ಕೊಡುತ್ತೇವೆ. ಅದೇ ರೀತಿ ನಮಗೆ ನಮ್ಮ ಭಾಗದ ಊಟವನ್ನು ನೀಡಿದರೆ ಅನುಕೂಲವಾಗುತ್ತದೆ ಎಂದು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News