'ರೈತರ ಆತ್ಮಹತ್ಯೆಗೆ ಸರಕಾರಗಳು ಕಾರಣ': ವಿವಿಧ ಪಕ್ಷಗಳು, ರೈತರಿಂದ ಕಳಸ ಪಟ್ಟಣ ದಿಢೀರ್ ಬಂದ್

Update: 2019-10-03 18:00 GMT

ಕಳಸ, ಅ.3: ಹೋಬಳಿ ವ್ಯಾಪ್ತಿಯ ಎಸ್.ಕೆ.ಮೇಗಲ್ ಗ್ರಾಮದಲ್ಲಿ  ಬುಧವಾರ ರಾತ್ರಿ ರೈತ ಚಂದ್ರೇಗೌಡ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಘಟನೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಾಗೂ ನೂರಾರು ರೈತರು ಮತ್ತು ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಕೆಲಕಾಲ ಮೃತ ರೈತನ ಶವವನ್ನು ಮುಂದಿಟ್ಟುಕೊಂಡು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಬೆಳಗ್ಗೆ ರೈತ ಚಂದ್ರೇಗೌಡ ಅವರ ಆತ್ಮಹತ್ಯೆ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಪಟ್ಟಣದ ನಾಡಕಚೇರಿ ಆವರಣದಲ್ಲಿ ಜಮಾಯಿಸಿದ ಸಾರ್ವಜನಿಕರು ಹಾಗೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಜಿಲ್ಲಾಡಳಿತ, ಉಸ್ತುವಾರಿ ಸಚಿವ ಸಿ.ಟಿ.ರವಿ ಸೇರಿದಂತೆ ರಾಜ್ಯ, ಕೇಂದ್ರ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪಟ್ಟಣ ಬಂದ್‍ಗೆ ದಿಢೀರ್ ಕರೆ ನೀಡಿದರು. 

ನಂತರ ವಿವಿಧ ಪಕ್ಷಗಳ ಮುಖಂಡರು ಪಟ್ಟಣದ ಮುಖ್ಯರಸ್ತೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದರು. ಮೆರವಣಿಗೆ ಉದ್ದಕ್ಕೂ ಅತಿವೃಷ್ಟಿಯಲ್ಲಿ ಹಾನಿಯಾದ ಪ್ರದೇಶಗಳಿಗೆ ಪರಿಹಾರ ನೀಡದಿರುವ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ಮುಂದಾದರು. ನಂತರ ಕೆ.ಎಂ.ರಸ್ತೆಯಲ್ಲಿ ಕೆಲಕಾಲ ಮೃತ ರೈತ ಚಂದ್ರೇಗೌಡ ಅವರ ಶವ ಇಟ್ಟು ಸರಕಾರಗಳು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಆರ್.ಪ್ರಭಾಕರ್, ಈ ಭಾಗದಲ್ಲಿ ನೆರೆಯಿಂದ ಸಾಕಷ್ಟು ಹಾನಿಯಾಗಿದೆ. ರೈತರ ಬದುಕು ಸರ್ವನಾಶವಾಗಿದೆ. ಸರಕಾರ ರೈತರಿಗೆ ಪರಿಹಾರ ನೀಡದಿರುವ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕಳಸ ಹೋಬಳಿ ಕಾರಗದ್ದೆ ಗ್ರಾಮದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ ಚನ್ನಪ್ಪಗೌಡ ಅವರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಯಿತೇ ಹೊರತು ಇದುವರೆಗೂ ಸರಕಾರ, ಜಿಲ್ಲಾಡಳಿತ ಪರಿಹಾರಧನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕೂಡಲೇ ಸರಕಾರ ಅತಿವೃಷ್ಟಿಯಲ್ಲಿ ಹಾನಿಯಾದ ರೈತರ ಜಮೀನುಗಳಿಗೆ ಪರಿಹಾರ ನೀಡಬೇಕು. ಅತಿವೃಷ್ಟಿಯಿಂದ ಜಮೀನು ಕಳೆದುಕೊಂಡಿರುವ ಚೆನ್ನಪ್ಪಗೌಡ ಹಾಗೂ ಚಂದ್ರೇಗೌಡ ಅವರ ಕುಟುಂಬಗಳಿಗೆ ಶೀಘ್ರ ಪರಿಹಾರ ಧನವನ್ನು ನೀಡಬೇಕು. ತಪ್ಪಿದಲ್ಲಿ ಕಳಸದಿಂದ ವಿದಾನಸೌಧದವರೆಗೂ ಪಾದಯಾತ್ರೆ ಮಾಡಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, ಸರಕಾರದ ವಿಳಂಬ ನೀತಿ ಧೋರಣೆಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ನೋವಿಗೆ ಸ್ಪಂದಿಸಬೇಕಾದ ಸರಕಾರ ಮೌನಕ್ಕೆ ಜಾರಿ ಸರಕಾರ ಉಳಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೇವಲ ಪರಿಹಾರದ ಭರವಸೆಯನ್ನು ನೀಡುತ್ತಿದ್ದಾರೆಯೇ ಹೊರತು ಬಿಡಿಗಾಸು ಪರಿಹಾರವನ್ನೂ ಸಂತ್ರಸ್ಥರಿಗೆ ಕೊಡುತ್ತಿಲ್ಲ. ಇದರಿಂದ ಮನೆ ಮಠ, ಜಮೀನು ಕಳೆದುಕೊಂಡ ರೈತರ ಬದುಕು ಕಷ್ಟವಾಗಿದೆ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರಕಾರ ಅತಿವೃಷ್ಟಿಯಿಂದ ಜಮೀನು ಕಳದುಕೊಂಡ ರೈತರ ಪರಿಹಾರಧನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದರು. 

ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ 15 ಸಾವಿರ ರೂ., ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಬ್ಯಾಂಕ್ ವತಿಯಿಂದ 25 ಸಾವಿರ ರೂ. ಅನ್ನು ಮೃತ ಚಂದ್ರೇಗೌಡ ಅವರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡ ಕೆ.ಸಿ.ಧರಣೇಂದ್ರ, ಹಿತ್ಲುಮಕ್ಕಿ ರಾಜೇಂದ್ರ ಪ್ರಸಾದ್, ಜ್ವಾಲನಯ್ಯ, ಭರತರಾಜ್, ಕೆ.ಸಿ.ಮಹೇಶ್, ಬ್ರಹ್ಮದೇವ, ಮಂಜುನಾಥ್, ವಿಶ್ವನಾಥ್, ಅನಿಲ್, ವೀರೇಂದ್ರ, ಅವಿನಾಶ್, ರಾಮಮೂರ್ತಿ, ರಿಝ್ವಾನ್, ಅನಿಲ್ ಡಿಸೋಜಾ ಇತರರು ಇದ್ದರು.

ಬಂದ್‍ಗೆ ಸಹಕಾರ ನೀಡದ ಕೆಲ ವ್ಯಾಪಾರಿಗಳು; ಮಾತಿನ ಚಕಮಕಿ
ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ರಾಜ್ಯ ಹಾಗೂ ಕೇಂದ್ರ ಸರಕಾರಗಳೇ ಕಾರಣ ಎಂದು ಆರೋಪಿಸಿ ವಿವಿಧ ಪಕ್ಷಗಳ ಮುಖಂಡರು ಹಾಗೂ ರೈತರು ಗುರುವಾರ ಪಟ್ಟಣದಲ್ಲಿ ಬಂದ್‍ಗೆ ಕರೆ ನೀಡಿದ್ದರು. ಬಂದ್‍ಗೆ ಕರೆ ನೀಡುತ್ತಿದ್ದಂತೆ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತರಾಗಿ ವ್ಯಾಪಾರ ಸ್ಥಗಿತಗೊಳಿಸಿ ಬಾಗಿಲು ಮುಚ್ಚುವ ಮೂಲಕ ರೈತನ ಸಾವಿಗೆ ನ್ಯಾಯ ಸಿಗಲೆಂದು ಆಶಿಸಿದರು. ಆದರೆ ಕೆಲ ವ್ಯಾಪಾರಿಗಳು ಮಾತ್ರ ತಮ್ಮ ಅಂಗಡಿಗಳ ಬಾಗಿಲು ಮುಚ್ಚದೇ ಬಂದ್‍ಗೆ ಸಹಕಾರ ನೀಡಲು ನಿರಕಾರಿಸಿದ ದೃಶ್ಯಗಳು ಗುರುವಾರ ಪಟ್ಟಣದಲ್ಲಿ ಕಂಡು ಬಂದವು.

ಇದರಿಂದಾಗಿ ಧರಣಿ ನಿರತರು ಹಾಗೂ ಅಂಗಡಿ ಮಾಲಕರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಸ್ಥಳದಲ್ಲಿ ಗೊಂದಲ ಉಂಟಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ವೇಳೆ ಧರಣಿ ನಿರತರು ಮೃತ ರೈತನ ಶವವನ್ನು ಅಂಗಡಿ ಮುಂದೆ ಇಟ್ಟು ಪ್ರತಿಭಟನೆ ಮಾಡಲು ನಿರ್ಧರಿಸಿದರು. ಅಲ್ಲದೆ ನಿಮ್ಮ ಅಂಗಡಿ ವ್ಯಾಪಾರ ವಹಿವಾಟುಗಳು ನಡೆಯುತ್ತಿರುವುದು ಇದೇ ಬಡಪಾಯಿ ರೈತರಿಂದ, ಆದರೆ ರೈತರಿಗೆ ಅನ್ಯಾಯವಾದಾಗ ನೀವು ಅವರಿಗೆ ಸ್ಪಂದಿಸುತ್ತಿಲ್ಲ. ಇಂತಹ ಅಂಗಡಿಗಳಲ್ಲಿ ವ್ಯಾಪಾರ ಮಾಡುವುದನ್ನು ಎಲ್ಲಾ ರೈತರು ಬಹಿಷ್ಕರಿಸಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸುವುದನ್ನು ತಡೆಯಲು ಬಂದ ಪೋಲಿಸರೊಂದಿಗೂ ಧರಣಿ ನಿರತರು ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಮಾತಿನ ಚಕಮಕಿ ನಡೆಯುತ್ತಿರುವುದನ್ನು ಗಮನಿಸಿದ ಕೆಲ ವರ್ತಕರು ಅಂಗಡಿ ಬಾಗಿಲು ಮುಚ್ಚಿದ ದೃಶ್ಯಗಳು ಕಂಡು ಬಂದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News