ಮೂವರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ: ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ

Update: 2019-10-04 14:45 GMT

ಬೆಂಗಳೂರು, ಅ.4: ರಾಜ್ಯದ ಮೂರು ಅಧಿಕಾರಿಗಳ ಕಚೇರಿ ಮತ್ತು ನಿವಾಸ ಸೇರಿದಂತೆ ಒಟ್ಟು 16 ಸ್ಥಳಗಳಲ್ಲಿ ನಡೆದ ಎಸಿಬಿ ದಾಳಿ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ(ಅಮಾನತ್ತು) ಎಸ್.ಮೂರ್ತಿ ಅವರ ನಿವಾಸ ಮತ್ತು ಸಂಬಂಧಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ, ಬೆಂಗಳೂರಿನ ಸದಾಶಿವನಗರದಲ್ಲಿ ಒಂದು ಮನೆ, ಎಚ್‌ಎಂಟಿ ಕಾಲನಿ, ಓಂ ಶಕ್ತಿ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲಾಟ್, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ 3 ನಿವೇಶನ, ದೇವನಹಳ್ಳಿಯಲ್ಲಿ 2 ಎಕರೆ ಜಮೀನು, ಕೊಡಗು ಜಿಲ್ಲೆಯ ಕೆ.ನಿಡುಗಣೆ ಗ್ರಾಮದಲ್ಲಿ ಒಟ್ಟು 11 ಎಕರೆ 85 ಸೆಂಟ್ ಕಾಫಿ ತೋಟ, 460 ಗ್ರಾಂ ಚಿನ್ನ, 3 ಕಾರು, 3 ಬೈಕ್, 5 ಬ್ಯಾಂಕ್ ಖಾತೆಗಳು ಹಾಗೂ 1 ಲಾಕರ್ ಪತ್ತೆಯಾಗಿದೆ.

ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಕೆ.ಹನುಮಂತಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹೊಸಪೇಟೆ ಎಂಜೆ ನಗರದಲ್ಲಿ 2 ವಾಸದ ಮನೆ ಹಾಗೂ ಹೂವಿನ ಹಡಗಲಿಯಲ್ಲಿ 1 ಮನೆ, ನಾಗತಿ ಬಸಾಪುರದಲ್ಲಿ 1 ಶಾಲಾ ಕಟ್ಟಡ, 3 ನಿವೇಶನ ಹಾಗೂ 12 ಎಕರೆ 37 ಸೆಂಟ್ ಜಮೀನು, 330 ಗ್ರಾಂ ಚಿನ್ನ, 277 ಗ್ರಾಂ ಬೆಳ್ಳಿ, 1 ಕಾರು, 2 ಶಾಲಾ ಬಸ್‌ಗಳು, 3 ದ್ವಿಚಕ್ರ ವಾಹನಗಳು, 90 ಸಾವಿರ ನಗದು, 43 ಲಕ್ಷ ಠೇವಣಿ, 23.97 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಿರಿಯ ಅಭಿಯಂತರ ವಿಜಯ ರೆಡ್ಡಿ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ಪರಿಶೀಲಿಸುವ ವೇಳೆ, ಹುಮನಾಬಾದ್ ನಗರದಲ್ಲಿ 2 ಮನೆ, 2 ಅಂಗಡಿ. 4 ನಿವೇಶನಗಳು, 29.09 ಗುಂಟೆ ಕೃಷಿ ಜಮೀನು, 981 ಗ್ರಾಂ ಚಿನ್ನ , 717 ಗ್ರಾಂ ಬೆಳ್ಳಿ, 1 ಕಾರು, 2 ಬೈಕ್, 1.27 ಲಕ್ಷ ನಗದು, 30 ಸಾವಿರ ರೂ. ಠೇವಣಿ, 31.55 ಲಕ್ಷ ರೂ. ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಆರೋಪಿಗಳ ಕೆಲ ಆಸ್ತಿಗಳು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿದ್ದು, ಈ ಸಂಬಂಧ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News