ನಿಮ್ಮ ಪ್ರಕಾರವೇ ಪರಿಹಾರ ನೀಡಿದರೆ ನನಗೂ 1 ಕೋಟಿ ನೀಡಬೇಕಾಗುತ್ತದೆ: ಲಕ್ಷ್ಮಣ ಸವದಿ

Update: 2019-10-04 15:08 GMT

ಬೆಳಗಾವಿ, ಅ. 4: ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇದೀಗ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರ ಸಂಬಂಧ ಉಡಾಫೆ ಹೇಳಿಕೆ ನೀಡುವ ಮೂಲಕ ಸಂತ್ರಸ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಶುಕ್ರವಾರ ನಗರದಲ್ಲಿ ನೆರೆ ಪರಿಹಾರ ವಿತರಣೆ ಪರಿಶೀಲನಾ ಸಭೆಯಲ್ಲಿ ಎಕರೆಗೆ 50 ಸಾವಿರ ರೂ.ನಿಂದ 1ಲಕ್ಷ ರೂ.ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂತ್ರಸ್ತರು ಮನವಿ ಮಾಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಲಕ್ಷ್ಮಣ ಸವದಿ, ‘ನನ್ನದು ನೂರು ಎಕರೆ ಜಮೀನಿದ್ದು ಬೆಳೆ ನಷ್ಟ ಉಂಟಾಗಿದೆ. ನಿಮ್ಮ ಪ್ರಕಾರವೇ ಪರಿಹಾರ ನೀಡಿದರೆ ನನಗೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ’ ಎಂದು ಹೇಳುವ ಮೂಲಕ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಈ ಹಂತದಲ್ಲಿ ಸಂತ್ರಸ್ತರನ್ನು ಸಮಾಧಾನಪಡಿಸಿದ ಯಡಿಯೂರಪ್ಪ, ಸದ್ಯಕ್ಕೆ ಸರಕಾರದ ಬೊಕ್ಕಸದಲ್ಲಿ ಹಣವಿಲ್ಲ. ಕೇಂದ್ರದಿಂದ ನೆರೆ ಪರಿಹಾರದ ಹಣ ಬರಬೇಕಿದೆ. ಕೇಂದ್ರದ ಅನುದಾನ ಬಂದ ಕೂಡಲೆ ಸಂತ್ರಸ್ತರಿಗೆ ನೆರೆ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News