ಹೈಕೋರ್ಟ್‌ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಪತ್ರ: ಆರೋಪಿ ಬಂಧನ
ಬೆಂಗಳೂರು, ಅ.4: ಹೈಕೋರ್ಟ್ ಕಟ್ಟಡಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಹೊಸದಿಲ್ಲಿಯ ಮೋತಿ ನಗರ ನಿವಾಸಿ ಹ್ರದರ್ಶನ್ ಸಿಂಗ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ಇಂಟರ್ ನ್ಯಾಷನಲ್ ಖಾಲಿಸ್ತಾನ್ ಸಪೋರ್ಟ್ ಗ್ರೂಪ್‌ಗೆ ಸೇರಿದ ಸದಸ್ಯನಾಗಿದ್ದು, ಬೆಂಗಳೂರಿನ ಹೈಕೋಟ್ ಕಟ್ಟಡಕ್ಕೆ ಬಾಂಬ್ ಇಡಲಾಗುವುದೆಂದು ಬೆದರಿಕೆ ಹಾಕಿ ಆರೋಪಿಯು ಸೆ.9 ರಂದು ಪತ್ರ ಬರೆದು, ಹೈಕೋರ್ಟ್‌ಗೆ ತಲುಪಿಸಿದ್ದ ಎನ್ನಲಾಗಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ಹೈಕೋರ್ಟ್‌ನ ಭದ್ರತೆಯನ್ನು ಹೆಚ್ಚಿಸಿ ನಿಗಾವಹಿಸಲಾಗಿತ್ತು. ಪತ್ರ ಬರೆದ ಆರೋಪಿಗಾಗಿ ವಿಶೇಷ ತಂಡ ರಚಿಸಿದ್ದು, ತಂಡವು ಕಾರ್ಯಾಚರಣೆ ಕೈಗೊಂಡು ಆರೋಪಿಯು ಇರುವ ಸ್ಥಳವನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಈತನ ಸಂಬಂಧಿ ರಾಜೇಂದ್ರ ಸಿಂಗ್ ಮೂಲಕ ಪತ್ರವನ್ನು ಅಂಚೆ ಮೂಲಕ ಕಳುಹಿಸಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಈಗಾಗಲೇ ರಾಜೇಂದ್ರ ಸಿಂಗ್‌ನನ್ನು ಚೆನ್ನೈ ಪೊಲೀಸರು ಬಂಧಿಸಿದ್ದು, ಕುಟುಂಬ ಕಲಹದ ಹಿನ್ನೆಲೆಯಲ್ಲಿ ತನ್ನ ಮಾವನಿಗೆ ತೊಂದರೆ ಕೊಡುವ ಸಲುವಾಗಿ ಈ ಪತ್ರ ಬರೆದಿರುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.