ತೆರಿಗೆ ವ್ಯವಸ್ಥೆ ಬಲವರ್ಧನೆಗೆ ತಂತ್ರಜ್ಞಾನ ಬಳಕೆ ಅಗತ್ಯ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Update: 2019-10-05 14:03 GMT

ಧಾರವಾಡ, ಅ. 5: ತೆರಿಗೆ ಸುಧಾರಣೆ ಇಂದಿನ ತುರ್ತು ಅಗತ್ಯವಾಗಿದೆ. ಜಿಎಸ್‌ಟಿ ತಂತ್ರಜ್ಞಾನ ಅವಲಂಬಿಸಿದೆ. ಎರಡು ತೆರಿಗೆಗಳು ಅಥವಾ ಪುನರಾವರ್ತಿತ ತೆರಿಗೆ ಬದಲಿಗೆ ಒಂದೇ ತೆರಿಗೆ ನೀತಿ ಒಳಗೊಂಡಿದೆ ಎಂದು ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಶನಿವಾರ ಸತ್ತೂರಿನ ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ರಾಜ್ಯ ತೆರಿಗೆ ಸಲಹೆಗಾರರ ಸಂಘ ಏರ್ಪಡಿಸಿದ್ದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರ ಮೇಲಿನ ತೆರಿಗೆ ಕಡಿಮೆ ಮಾಡಲು ಈ ಪದ್ದತಿಯನ್ನು ಜಾರಿಗೆ ತಂದಿದೆ. ಹಲವು ವಸ್ತುಗಳ ಮೇಲೆ ಬೀಳುತ್ತಿದ್ದ ತೆರಿಗೆಯ ನಿಯಂತ್ರಣ ಸಾಧಿಸಲು ಸಹಕಾರಿ. ಜನರು ಇದರೊಂದಿಗೆ ಹೊಂದಾಣಿಕೆ ಆಗಬೇಕಿದೆ. ಜನರಿಗೆ ಇದನ್ನು ತಿಳಿದುಕೊಳ್ಳಲು ಸಮಯಾವಕಾಶ ಬೇಕಾಗುತ್ತದೆ. ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ. ದೇಶದ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಹೊರೆಯಾಗದಂತೆ ನಿರೂಪಿಸಲಾಗಿದೆ ಎಂದರು.

ತೆರಿಗೆ ಸಲಹೆಗಾರರ ಮಾನ್ಯತೆಯನ್ನು ಕೇಂದ್ರ ಪರಿಗಣಿಸಲಿದೆ. ಬೆಳೆಯುತ್ತಿರುವ ತೆರಿಗೆ ಪದ್ಧತಿಯನ್ನು ಡಿಜಿಟಲ್ ಮಾಡಲಾಗಿದ್ದು, ನೇರ ಹಾಗೂ ಪರೋಕ್ಷವಾಗಿ ತೆರಿಗೆ ಶೇ.85ರಷ್ಟು ತೆರಿಗೆ ವಂಚನೆ ತಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಜಿಡಿಪಿ ಹೊಡೆತ ಬಿದ್ದಿದೆ. ನೋಟು ಅಮಾನ್ಯೀಕರಣದಿಂದ ಸಾಕಷ್ಟು ಪ್ರಮಾಣದಲ್ಲಿ ತೆರಿಗೆ ವಂಚನೆ ಕಡಿಮೆ ಆಗಿದೆ. ಸಾಧ್ಯವಾದಷ್ಟೂ ಪ್ರಾಮಾಣಿಕತೆ ಅಳವಡಿಸಿಕೊಳ್ಳಿ, ತೆರಿಗೆ ಆರ್ಥಿಕ ಸ್ವಾತಂತ್ರ್ಯ ಬೇಕಾಗಿದೆ. ದೇಶಕ್ಕಾಗಿ ಬಲಿದಾನದ ಅಗತ್ಯವಿಲ್ಲ. ಆದರೆ ತೆರಿಗೆ ವ್ಯವಸ್ಥೆ ಬಲಪಡಿಸಬೇಕು. ರೈತರಿಗೆ ಸೌಲಭ್ಯ, ಮೂಲಸೌಕರ್ಯ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಹೆಚ್ಚು ಜನರು ತೆರಿಗೆ ಕಟ್ಟಿದರೆ ಹೆಚ್ಚು ಆದಾಯ ಘೋಷಣೆ ಮಾಡಿದರೆ ಅವರಿಗೆ ಪ್ರೋತ್ಸಾಹ ಸಿಗುತ್ತದೆ. ಹೆಚ್ಚಿನ ಆದಾಯ ಬರುವಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು ಎಂದ ಅವರು, ತೆರಿಗೆ ಪ್ರಮಾಣ ಕಡಿಮೆ ಆಗಬೇಕಾದರೆ ಹೆಚ್ಚಿನ ತೆರಿಗೆ ಸಂಗ್ರಹ ಮಾಡಲು ಸಹಕರಿಸಬೇಕು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ತೆರಿಗೆ ಸಲಹೆಗಾರರು ತಮ್ಮ ವೃತ್ತಿ ತೊರೆದು ಗಾಂಧೀಜಿ ನೇತೃತ್ವದ ಚಳವಳಿಗೆ ಬೆಂಬಲ ಸೂಚಿಸಿದ್ದರು. ಇಂದು ವೃತ್ತಿ ತೊರೆಯುವುದು ಬೇಕಾಗಿಲ್ಲ, ಆದರೆ ಜನರಿಗೆ ಸಮರ್ಪಕ ತೆರಿಗೆಯ ಮೌಲ್ಯಮಾಪನ ಮಾಡಿ, ದೇಶಕ್ಕೆ ಕೊಡುಗೆ ನೀಡಬೇಕು ಎಂದು ನಿರ್ಮಲಾ ಸೀತಾರಾಮನ್ ಸಲಹೆ ನೀಡಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ದೇಶದ ರಕ್ಷಣಾ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ, ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಹಣಕಾಸು ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದರು.

ದೇಶದ ಆರ್ಥಿಕ ಪ್ರಗತಿಗೆ ಮಹತ್ವದ ಪಾತ್ರವಹಿಸುವ ತೆರಿಗೆ ಸಲಹೆಗಾರರಿಂದು ವೃತ್ತಿ ನೈತಿಕತೆ ಕುರಿತು ಪ್ರತಿಜ್ಞೆ ಸ್ವೀಕರಿಸಿರುವದು ಆಶಾದಾಯಕ ಬೆಳವಣಿಗೆ. ದೇಶದಲ್ಲಿ ಜಿಎಸ್‌ಟಿ ಮೂಲಕ ಸಾಕಷ್ಟು ಬದಲಾವಣೆಗಳು ಬರುತ್ತಿವೆ. ತೆರಿಗೆ ಸಲಹೆಗಾರರು ತಮ್ಮ ಕಕ್ಷಿದಾರರಿಗೆ ಸೂಕ್ತ ಕಾನೂನು ಸಲಹೆ ನೀಡಿ ನೆರವು ಒದಗಿಸಬೇಕು ಎಂದು ಕಿವಿಮಾತು ಹೇಳಿದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ತೆರಿಗೆ ಸಲಹೆಗಾರರು ಮತ್ತು ಚಾರ್ಟಡ್ ಅಕೌಂಟೆಂಟ್‌ಗಳ ಪಾತ್ರ ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ತೆರಿಗೆ ಪಾವತಿದಾರರ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಸರಕಾರಕ್ಕೆ ತೆರಿಗೆಗಳೇ ಪ್ರಮುಖ ಸಂಪನ್ಮೂಲಗಳಾಗಿವೆ ಎಂದರು.

ಸಂಸದ ಶಿವಕುಮಾರ್ ಉದಾಸಿ, ಶಾಸಕ ಅರವಿಂದ ಬೆಲ್ಲದ್, ಬೆಂಗಳೂರು ವಲಯದ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ವೈ.ಎನ್.ಶರ್ಮಾ ಸೇರಿದಂತೆ ಇನ್ನಿತರರು ಹಾಜರಿದ್ದರು.

ಘೇರಾವ್

‘ರಾಜ್ಯದಲ್ಲಿ ಭೀಕರ ಸ್ವರೂಪದ ನೆರೆ ಹಾವಳಿಯಿಂದ 22 ಜಿಲ್ಲೆಗಳಲ್ಲಿ ಸುಮಾರು 38 ಸಾವಿರ ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಆದರೆ, ಕೇಂದ್ರ ಸರಕಾರ ಎರಡು ತಿಂಗಳ ಬಳಿಕ ಜನತೆ ಪ್ರತಿಭಟನೆಗೆ ಮಣಿದು ಕೇವಲ 1,200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇನ್ನೂ ಹೆಚ್ಚಿನ ಮೊತ್ತದ ನೆರವು ನೀಡಬೇಕೆಂದು ಆಗ್ರಹಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯರು ಘೇರಾವ್ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News