ಬಿಎಸ್‌ವೈ ಕಡೆಗಣಿಸಿದರೆ ಬಿಜೆಪಿ ದಿವಾಳಿ: ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್

Update: 2019-10-05 14:10 GMT

ಬೆಳಗಾವಿ, ಅ. 5: ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕೇಂದ್ರ ಸರಕಾರ ಕಡೆಗಣಿಸುತ್ತಿದ್ದು, ಇದೇ ಧೋರಣೆ ಮುಂದುವರಿಸಿದರೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ದಿವಾಳಿಯಾಗಲಿದೆ ಎಂದು ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಎಚ್ಚರಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ 22 ಜಿಲ್ಲೆಗಳ ಜನತೆ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಸರಕಾರಗಳು ಯಾವುದೇ ಕಾರಣಕ್ಕೂ ಸಂತ್ರಸ್ತರನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.

ನೆರೆ ಬಂದ ಎರಡು ತಿಂಗಳ ಬಳಿಕ ಜನರ ಪ್ರತಿಭಟನೆಗೆ ಮಣಿದು ಕೇಂದ್ರ ಸರಕಾರ ಕೇವಲ 1,200 ಕೋಟಿ ರೂ. ಪರಿಹಾರ ನೀಡಿರುವುದು ಜನರ ಮೂಗಿಗೆ ತುಪ್ಪ ಸವರಿದಂತೆ. ಯಾವುದೇ ಕಾರಣಕ್ಕೂ ಈ ಹಣ ಸಾಲುವುದಿಲ್ಲ. ಕೇಂದ್ರ ಸರಕಾರ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಸರಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರೆ ಹೇಳಿರುವುದು ದುರ್ದೈವದ ಸಂಗತಿ ಎಂದ ಅವರು, ಸಂಪನ್ಮೂಲ ಕ್ರೋಡೀಕರಿಸಿ ನೆರೆ ಸಂತ್ರಸ್ತರ ನೆರವಿಗೆ ಕೂಡಲೇ ಧಾವಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಶ್ರಮವೇ ಕಾರಣ. ಅವರನ್ನು ಕೇಂದ್ರ ಸರಕಾರವಾಗಲೀ, ಪಕ್ಷದ ಹೈಕಮಾಂಡ್ ಆಗಲಿ ಕಡೆಗಣಿಸಬಾರದು. ಬಿಎಸ್‌ವೈ ಅವರ ಪುತ್ರ ಬಿ.ವೈ.ವಿಜಯೇಂದ್ರ ನಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದು, ಬಿಎಸ್‌ವೈ ಪಕ್ಷಕ್ಕೆ ಬಂದರೆ ಸ್ವಾಗತಿಸುವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News