ಪರಿಹಾರ ಪಡೆಯಲು ಸಂತ್ರಸ್ತರೇ ಮುಂದೆ ಬರುತ್ತಿಲ್ಲ: ಸಚಿವ ಮಾಧುಸ್ವಾಮಿ

Update: 2019-10-05 16:22 GMT

ತುಮಕೂರು ,ಅ.5: ನೆರೆ ಸಂತ್ರಸ್ತರಿಗೆ ತ್ವರಿತ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಪರಿಹಾರ ಪಡೆಯಲು ಸಂತ್ರಸ್ತರೇ ಮುಂದೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡಲು ಸಾಧ್ಯ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದ್ದಾರೆ.

ತುಮಕೂರಿನಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಮನೆ ಕಟ್ಟಿಕೊಳ್ಳಲು 50 ಸಾವಿರ ನೀಡಲಾಗುತ್ತಿದೆ. ಈ ಕುರಿತು ಅರ್ಜಿಯನ್ನು ನೀಡುವಂತೆ ಸಂತ್ರಸ್ತರಿಗೆ ಮನವಿ ಕೂಡಾ ಮಾಡಲಾಗಿದೆ. ಆದರೆ ಈ ತನಕ ಕೇವಲ 9 ಸಾವಿರ ಅರ್ಜಿಗಳು ಮಾತ್ರವೇ ಸಲ್ಲಿಕೆಯಾಗಿವೆ ಎಂದರು.

ತುಮಕೂರು ಜಿಲ್ಲೆಯಲ್ಲಿ 80 ಸಾವಿರ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ಆದರೆ ಶೇ 1 ರಷ್ಟು ಅರ್ಜಿಗಳು ಮಾತ್ರವೇ ಬಂದಿವೆ. ಪರಿಹಾರ ಕೇಳಲು ಜನರೇ ಮುಂದೆ ಬರದಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು.

ತಮ್ಮ ಮನೆಗಳಿಗೆ ಆಗಿರುವ ಹಾನಿಗಳ ಬಗ್ಗೆ ಸಂತ್ರಸ್ತರು ಜಿಲ್ಲಾಧಿಕಾರಿಗಳಿಗೆ ಸಮರ್ಪಕ ದಾಖಲೆಯನ್ನೇ ನೀಡುತ್ತಿಲ್ಲ. ಪರಿಹಾರ ಪಡೆದು ಮನೆಕಟ್ಟಿಕೊಳ್ಳಲು ಮುಂದಾಗುತ್ತಿಲ್ಲ. ನೆರೆಪೀಡಿತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಎಲ್ಲೂ ವಿಫಲವಾಗಿಲ್ಲ ಎಂದು ಸಮರ್ಥಿಸಿಕೊಂಡರು.

ಎರಡು ತಿಂಗಳ ಬಳಿಕ ಪರಿಹಾರ ಘೋಷಣೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರವೇ ಇದು ಮಧ್ಯಂತರ ಪರಿಹಾರ ಎಂದಿದೆ. ಇದು ಅಂತಿಮ ಅಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಹಾರ ಬರಲಿದೆ. ಕೇಂದ್ರ ಹಣ ನೀಡಲು ವಿಳಂಬ ತೋರಿತು. ಆದರೆ ಪರಿಹಾರ ಕಾರ್ಯ ಸುಗಮವಾಗಿ ನಡೆಯುತ್ತಿದೆ. ಈಗಾಗಲೇ ಮೂರು ಸಾವಿರ ಕೋಟಿ ವೆಚ್ಚದ ಪರಿಹಾರ ಯೋಜನೆಗಳನ್ನು ರೂಪಿಸಲಾಗಿದೆಯೆಂದು ಮಾಧು ಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News