ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ನಿರ್ಧಾರಕ್ಕೆ ಎಐಡಿಎಸ್‌ಓ ಖಂಡನೆ
ಬೆಂಗಳೂರು, ಅ. 5: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಏಳನೆ ತರಗತಿಗೆ ಪಬ್ಲಿಕ್ ಪರಕ್ಷೆ ನಡೆಸಲಾಗುವುದೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದು, ಬರೀ ಐದೇ ತಿಂಗಳಲ್ಲಿ ಪರೀಕ್ಷೆ ಬರಲಿದ್ದು ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿರುವುದು ಸಲ್ಲ ಎಂದು ಎಐಡಿಎಸ್‌ಓ ಖಂಡಿಸಿದೆ.
ಶಿಕ್ಷಣದಲ್ಲಿ ಯಾವುದೇ ಬದಲಾವಣೆ ತರುವ ಮುನ್ನ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಶಿಕ್ಷಕರು, ವಿದ್ಯಾರ್ಥಿ ಸಂಘಟನೆಗಳೊಂದಿಗೆ ಚರ್ಚೆ ನಡೆಯಬೇಕು. ಆ ಬದಲಾವಣೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಪೂರಕವಾಗಿದೆಯೊ ಇಲ್ಲವೋ ಎಂಬುದರ ಸಮಾಲೋಚನೆ ನಡೆಯಬೇಕು.
ಆದರೆ, ಯಾವುದೇ ಪೂರ್ವ ತಯಾರಿಯಿಲ್ಲದೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದಂತೆ. ರಾಜ್ಯದ ಅನೇಕ ಜಿಲ್ಲೆಗಳು ಇನ್ನೂ ನೆರೆಯ ಪ್ರಭಾವದಿಂದ ಚೇತರಿಸಿಕೊಂಡಿಲ್ಲ. ರಾಜ್ಯದಲ್ಲಿ ತೀವ್ರವಾದ ಶಿಕ್ಷಕರ, ಸಿಬ್ಬಂದಿಗಳ ಕೊರತೆ ಇದೆ.
ಮೂಲಸೌಕರ್ಯಗಳ ತೀವ್ರವಾದ ಅಭಾವವಿದೆ. ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಸರಕಾರಿ ಶಾಲೆಗಳನ್ನು ರಾಜ್ಯದಲ್ಲಿ ಮುಚ್ಚಲಾಗುತ್ತಿದೆ. ಶಾಲೆಗಳ ಮೂಲಸೌಕರ್ಯ ಉತ್ತಮಗೊಳಿಸುವಂತೆ ಹಾಗೂ ಅವಶ್ಯಕತೆಗೆ ತಕ್ಕಂತೆ ಶಿಕ್ಷಕರು ಹಾಗೂ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಲಾಗುತ್ತಿದೆ.
ಸರಕಾರದ ತರಾತುರಿ ನಿರ್ಧಾರವನ್ನು ಹಿಂಪಡೆಯಬೇಕು. ಪ್ರಾಥಮಿಕ ಶಿಕ್ಷಣವನ್ನು ಉಳಿಸುವಲ್ಲಿ, ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಪ್ರಿಯರು ಹೋರಾಟಕ್ಕೆ ಮುಂದೆ ಬರಬೇಕೆಂದು ಎಐಡಿಎಸ್‌ಓ ಅಧ್ಯಕ್ಷೆ ಕೆ.ಎಸ್.ಅಶ್ವಿನಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.