ಸರ್ವಾಧಿಕಾರಿ ಹಿಟ್ಲರ್‌ನ ಪ್ರವೃತ್ತಿ ಮೋದಿಯವರಲ್ಲಿದೆ: ವಿ.ಎಸ್.ಉಗ್ರಪ್ಪ

Update: 2019-10-06 12:30 GMT

ಬಳ್ಳಾರಿ, ಅ. 6: ದೇಶದ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದರೆ ದೇಶದ್ರೋಹದ ಪ್ರಕರಣ ದಾಖಲಿಸುತ್ತಾರೆ. ಸರ್ವಾಧಿಕಾರಿ ಹಿಟ್ಲರ್‌ನ ಪ್ರವೃತ್ತಿ ಮೋದಿಯವರಲ್ಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮೋದಿ ಮುಂದೆ ಸ್ವಾಭಿಮಾನ ಕಳೆದುಕೊಂಡಿದ್ದು, ಪ್ರಧಾನಿ ಭೇಟಿಗೆ ಸಮಯ ಕೇಳಿದರೆ ನಾಲ್ಕೈದು ಬಾರಿ ತಿರಸ್ಕರಿಸಿದ್ದಾರೆ ಎಂದು ಟೀಕಿಸಿದರು.

ನಿರ್ಬಂಧ ಸಲ್ಲ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಬೇಕಿದ್ದ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಲು ಮುಂದಾಗಿರುವುದು ಸಲ್ಲ. ಬೆಳಗಾವಿಯಲ್ಲೆ ಅಧಿವೇಶನ ನಡೆಸಬೇಕೆಂದು ಆಗ್ರಹಿಸಿದ ಅವರು, ಅಧಿವೇಶನಕ್ಕೆ ಮಾಧ್ಯಮಗಳ ನಿರ್ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರಕ್ಕೆ ಧಕ್ಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ನಿಯಮ ಬದಲಿಸಿ: ಬರ-ನೆರೆ ಪರಿಹಾರ ನೀಡಲು ಎನ್‌ಡಿಆರ್‌ಎಫ್, ಎಸ್‌ಟಿಆರ್‌ಎಫ್ ಮಾರ್ಗಸೂಚಿಗಳನ್ನು ಬದಲಾವಣೆ ಮಾಡುವ ಅಗತ್ಯವಿದೆ ಎಂದ ಅವರು, ಆಗಿರುವ ನಷ್ಟವನ್ನು ಪರಿಹಾರದ ರೂಪದಲ್ಲಿ ನೀಡುವ ಅಗತ್ಯವಿದೆ ಎಂದು ಉಗ್ರಪ್ಪ ಆಗ್ರಹಿಸಿದರು.

ಬಳ್ಳಾರಿ ಜಿಲ್ಲೆಗೆ ಇತಿಹಾಸ ಇದೆ. ಇಲ್ಲಿನ ಜನರ ಬದುಕಿನ ಜೊತೆ ಯಾರೂ ಚೆಲ್ಲಾಟ ಆಡಬಾರದು. ಚುನಾವಣೆಗಾಗಿ ಕೆಲವರ ವೈಯಕ್ತಿಕ, ಭಾವನಾತ್ಮಕ ವಿಚಾರ ಜನರ ಮುಂದೆ ಒಯ್ಯುವುದು ಸಲ್ಲ. ಮೊದಲು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಮಾಡಿ ಎಂದು ಉಗ್ರಪ್ಪ ಒತ್ತಾಯಿಸಿದರು.

ಜಿಲ್ಲೆ ವಿಭಜನೆ ಸಂಬಂಧ ಬಳ್ಳಾರಿ ಅಖಂಡವಾಗಿ ಉಳಿಯಬೇಕೋ, ವಿಭಜನೆಯಾಗಬೇಕೋ ಎಂಬುದರ ಕುರಿತು ಜನಾಭಿಪ್ರಾಯ ಸಂಗ್ರಹ ಮಾಡಿ, ಅಂತಿಮ ನಿರ್ಣಯ ತೆಗೆದುಕೊಳ್ಳುಬೇಕು. ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆ ಒಡೆಯುವುದು ಬೇಡ ಎಂದು ಅವರು ಆಕ್ಷೇಪಿಸಿದರು.

ದ್ವೇಷದ ರಾಜಕಾರಣ: ಅಗ್ಗದ ದರದಲ್ಲಿ ಬಡಜನರಿಗೆ ಊಟ-ಉಪಹಾರ ನೀಡುವ ಇಂದಿರಾ ಕ್ಯಾಂಟೀನ್ ರದ್ದು ಮಾಡುವ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಷ್ಟದಲ್ಲಿದೆ ಎಂದು ಮುಚ್ಚಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

‘ವಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ಮೂಲ-ವಲಸಿಗ ಕಾಂಗ್ರೆಸಿಗರೆಂಬ ಅಸಮಾಧಾನ ಇಲ್ಲ. ಎಲ್ಲರೂ ಕಾಂಗ್ರೆಸ್ ನಾಯಕರೇ, ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಅವರವರ ಅಭಿಪ್ರಾಯ ಹೇಳುವುದರಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ಪಕ್ಷದ ಹೈಕಮಾಂಡ್ ವಿಪಕ್ಷ ನಾಯಕರ ಆಯ್ಕೆ ಕುರಿತು ತಿರ್ಮಾನ ಮಾಡುತ್ತದೆ’

-ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News