ಔರಾದ್ಕರ್ ವರದಿ ಜಾರಿಗೆ ಮುಂದುವರಿದ ಗೊಂದಲ

Update: 2019-10-06 12:40 GMT

ಬೆಂಗಳೂರು, ಅ.6 : ರಾಜ್ಯ ಪೊಲೀಸರ ವೇತನ ಪರಿಷ್ಕರಣೆ ಕುರಿತ ಔರಾದ್ಕರ್ ವರದಿ ಜಾರಿ ಸಂಬಂಧ ಗೊಂದಲ ಮುಂದುವರಿದಿದ್ದು, ಸರಕಾರ ಹಾಗೂ ಹಣಕಾಸು ಇಲಾಖೆ ನಡುವೆ ಸಹಮತ ಏರ್ಪಟ್ಟಿಲ್ಲ.

ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು 21 ದಿನಗಳ (ಸೆ.13) ಹಿಂದಷ್ಟೇ, ಪೊಲೀಸ್ ಕಾನ್ಸ್‌ಸ್ಟೇಬಲ್(ನಾಗರೀಕ ಮತ್ತು ಮೀಸಲು ಪಡೆ) ಹೆಡ್ ಕಾನ್ಸ್‌ಸ್ಟೇಬಲ್, ಸಹಾಯಕ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ವರಿಷ್ಠಾಧಿಕಾರಿಗಳು (ನಾನ್ ಐಪಿಎಸ್) ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದ್ದರು. ಇದಾದ ಕೇವಲ ಐದೇ ದಿನಕ್ಕೆ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ ಎಂ.ಎ.ಸಲೀಂ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದೆ ಎಂಬ ನೆಪವೊಡ್ಡಿ ಪರಿಷ್ಕೃತ ವೇತನಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಸೆಪ್ಟೆಂಬರ್ ಅಂತ್ಯದೊಳಗೆ ಹೊಸ ಆದೇಶ ಮಾಡುವುದಾಗಿಯೂ ಭರವಸೆ ನೀಡಿದ್ದರು.

ಇದೀಗ ಪೊಲೀಸ್ ಸಿಬ್ಬಂದಿಗೆ ಸೆಪ್ಟೆಂಬರ್ ತಿಂಗಳ ವೇತನ ಖಾತೆಗಳಿಗೆ ಜಮೆ ಆಗಿದ್ದು ವೇತನ ಪರಿಷ್ಕರಣೆಯಾಗಿಲ್ಲ. ಅಲ್ಲದೆ, ಕಷ್ಟ ಪರಿಹಾರ ಭತ್ಯೆ ಎರಡು ಸಾವಿರ ರೂ. ಏರಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಆದರೆ ವೇತನದಲ್ಲಿ ಒಂದು ಸಾವಿರ ರೂ. ಮಾತ್ರ ಜಮೆಯಾಗಿದೆ.

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಔರಾದ್ಕರ್ ವರದಿ ಜಾರಿ ಬಗ್ಗೆ ಸರಕಾರದ ಗಮನಕ್ಕೆ ತಂದರೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಸಮಾನ ವೇತನ, ಸಮಾನ ಶ್ರೇಣಿಗೆ ಅನುಗುಣವಾಗಿ ವೇತನ ನಿಗದಿ ಮಾಡುವುದು ಕಷ್ಟದಾಯಕ. ಅದರಿಂದ ಕೋಟ್ಯಾಂತರ ಹೊರೆಯಾಗುತ್ತದೆ ಎನ್ನುತ್ತಿದ್ದಾರೆ.

ಪ್ರವಾಹ ಕಾರಣ: ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಸರಕಾರ ಬದಿಗಿಟ್ಟಿದೆ. ಸಂತ್ರಸ್ತರಿಗೆ ಪರಿಹಾರ ನೀಡಲು 500 ಕೋಟಿ ರೂ. ಬಿಡುಗಡೆ ಮಾಡಿದೆ. ಈ ನಡುವೆ ಔರಾದ್ಕರ್ ವರದಿ ಜಾರಿ ಮಾಡಿದರೆ ಬೊಕ್ಕಸಕ್ಕೆ ಇನ್ನಷ್ಟು ಹೊರೆ ಆಗುತ್ತದೆ ಎಂಬ ಕಾರಣಕ್ಕೆ ವರದಿ ಜಾರಿಗೆ ಹಿಂದೇಟು ಹಾಕಲಾಗಿದೆ ಎಂಬ ಮಾತು ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News