×
Ad

ಮಡಿಕೇರಿಯಲ್ಲಿ ಮಹಿಳಾ ದಸರಾ ಸಂಭ್ರಮ: ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು

Update: 2019-10-06 18:25 IST

ಮಡಿಕೇರಿ, ಅ.6: ಬಣ್ಣ ಬಣ್ಣದ ಸೀರೆಯನ್ನುಟ್ಟು, ಸರ್ವಾಲಂಕಾರ ಭೂಷಿತೆಯರಾರ ಮಹಿಳಾ ಮಣಿಗಳ ನಗು, ಉತ್ಸಾಹ, ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಕಾತುರ, ಸಂತಸಗಳು ಮಡಿಕೇರಿ ದಸರಾ ಜನೋತ್ಸವದ ‘ಮಹಿಳಾ ದಸರಾ’ವನ್ನು ವಿಶೇಷವನ್ನಾಗಿಸಿತು.

ಒಂದೆಡೆ ಮಹಿಳಾ ಸಂತೆ, ಮತ್ತೊಂದೆಡೆ ಮೆಹಂದಿ ಸ್ಪರ್ಧೆ, ಹಗ್ಗಜಗ್ಗಾಟ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಛದ್ಮವೇಷ ಸೇರಿ ಅನೇಕ ಸ್ಪರ್ಧಾ ಕಾರ್ಯಕ್ರಮಗಳು ವಿಶೇಷವಾಗಿ ಮಹಿಳೆಯರಿಗಾಗಿಯೇ ನಡೆಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಜಿಪಂ ಸಿಇಒ ಲಕ್ಷ್ಮಿ ಪ್ರಿಯಾ ಅವರು ಕೊಡಗಿನ ಸಾಂಪ್ರದಾಯಿಕ ಸೀರೆಯನ್ನುಟ್ಟು ಮಹಿಳೆಯರ ಮೆಚ್ಚುಗೆಗೆ ಪಾತ್ರರಾದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ಮೆಹಂದಿ ಹಾಕಿಸಿಕೊಳ್ಳುವ ಮೂಲಕ ಸ್ವರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಲ್ಲದೆ, ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಇತರರಿಗೂ ಪ್ರೇರಣೆ ನೀಡಿದರು.

ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಕಲಾಸಂಭ್ರಮ ವೇದಿಕೆಯಲ್ಲಿ ದಸರಾ ಜನೋತ್ಸವದ ಪ್ರಯುಕ್ತ ಆಯೋಜಿಸಿದ್ದ ಮಹಿಳಾ ದಸರಾ ಉತ್ಸವಕ್ಕೆ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಸಾಮಾಜಿಕ, ಆರ್ಥಿಕವಾಗಿ ಮಹಿಳೆಯರಿಂದ ಸಶಕ್ತರಾಗುತಿದ್ದು, ಸಮಾಜದಿಂದ ಸಿಗುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಜಿ.ಪಂ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕುಟುಂಬದ ಏಳಿಗೆಯೊಂದಿಗೆ ಸಮಾಜದ ಉನ್ನತಿಯಲ್ಲಿ ಮಹಿಳೆಯರ ಪಾತ್ರ ಹಿರಿದಾದುದೆಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸರ್ಕಾರಿ ಸೇವೆಯಲ್ಲಿರುವ ನಮಗೆ ನಾವಿರುವ ಸ್ಥಳಗಳಲ್ಲಿ ನಡೆಯುವ ಉತ್ಸವಗಳು ನಮಗೂ ಹಬ್ಬವೇ ಆಗಿದ್ದು, ಅತ್ಯಂತ ಸಂತೋಷದಿಂದ ದಸರಾ ಉತ್ಸವದಲ್ಲಿ ಭಾಗಿಯಾಗುತ್ತಿರುವುದಾಗಿ ಸಂತಸವನ್ನು ಹಂಚಿಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಮಾತನಾಡಿ, ವರ್ಷಂಪ್ರತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಆಶಿಸಿದರು. ಜಿ.ಪಂ ಸಿಇಒ ಲಕ್ಷ್ಮಿಪ್ರಿಯ ಮಾತನಾಡಿ, ಕೊಡಗು ಜಿಲ್ಲೆಯ ಮಹಿಳೆಯರು ಸಾಕಷ್ಟು ಪ್ರಜ್ಞಾವಂತರಾಗಿದ್ದು, ಅವರ ಹಕ್ಕುಗಳ ಬಗ್ಗೆ ಅರಿವನ್ನು ಹೊಂದಿರುವುದು ವಿಶೇಷವೆಂದು ತಿಳಿಸಿ, ಪ್ರತಿಭಾ ಅನಾವರಣಕ್ಕೆ ಮಹಿಳೆಯರು ಈ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. 

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ, ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಸದಸ್ಯರಾದ ಉಮಾಪ್ರಭು, ಕುಮುದ ರಶ್ಮಿ, ನಗರ ಸಭೆ ಮಾಜಿ ಅಧ್ಯಕ್ಷರಾದ ಜುಲೇಕಾಬಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಅರುಂಧತಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಗಾಯತ್ರಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತ ರೈ, ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕವಿತ ಬೊಳ್ಳಮ್ಮ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ತಾಲೂಕು ಅಧ್ಯಕ್ಷೆ ಕೆ.ಎಸ್. ಮುತ್ತಮ್ಮ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News