ರಾಜ್ಯದಲ್ಲಿ ಮಹಿಳಾ ಚಾಲಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ
ಬೆಂಗಳೂರು, ಅ.6: ಪುರುಷರಂತೆ ಮಹಿಳೆಯರೂ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಇದೀಗ ಡ್ರೈವಿಂಗ್ ಸೀಟ್‌ನಲ್ಲಿಯೂ ತನ್ನ ಸಾಮರ್ಥ್ಯ ಒರೆಗಚ್ಚುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಮಹಿಳಾ ಚಾಲಕರ ಸಂಖ್ಯೆ ಶೇ.40ರಷ್ಟು ಏರಿಕೆಯಾಗಿದೆ.
ಸಾರಿಗೆ ಇಲಾಖೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಮಹಿಳಾ ಚಾಲಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 2015 ರಲ್ಲಿ ರಾಜ್ಯದ ಮಹಿಳಾ ಚಾಲಕರ ಸಂಖ್ಯೆ ಬರೀ 17 ಲಕ್ಷವಿತ್ತು. ಇದೀಗ ಈ ಸಂಖ್ಯೆ 26.3 ಲಕ್ಷಕ್ಕೆ ಏರಿಕೆಯಾಗಿದ್ದು ವಾಹನಗಳನ್ನು ಚಲಾಯಿಸುವ ಮಹಿಳೆಯರ ಸಂಖ್ಯೆಯೂ ಏರಿಕೆಯಾಗಿದೆ. ಇತ್ತೀಚೆಗೆ ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತ ಹೆಚ್ಚಾದ ಮೇಲಂತೂ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗಿದೆ.
ಕಳಪೆ ಹಾಗೂ ದುಬಾರಿಯಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಕೆಲಸಕ್ಕೆ ಹೋಗುವ ಸಮಯಗಳಲ್ಲಿನ ಬದಲಾವಣೆ, ಗೇರ್ ಲೆಸ್ ವಾಹನಗಳ ಲಭ್ಯತೆ ಮತ್ತಿತರ ಕಾರಣಗಳಿಂದಾಗಿ ಮಹಿಳೆಯರು ತಾವೇ ಸ್ವತಃ ವಾಹನ ಚಾಲನೆಗೆ ಇಳಿದಿದ್ದಾರೆ. ಅದೇ ರೀತಿ ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಅಥವಾ ಅಗತ್ಯ ಸಂದರ್ಭಗಳಲ್ಲಿ ಮನೆಯ ವೃದ್ಧರನ್ನು ಆಸ್ಪತ್ರೆ ಮತ್ತಿತರೆಡೆಗೆ ಕರೆದೊಯ್ಯಲು ಸದಾ ಕೆಲಸದಲ್ಲಿ ಮುಳುಗಿರುವ ಗಂಡನನ್ನು ಅವಲಂಬಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಹಿಳೆಯರೇ ಡ್ರೈವಿಂಗ್ ಸೀಟಿನಲ್ಲಿ ಕೂರುತ್ತಿದ್ದಾರೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ವಿಶ್ಲೇಷಿಸುತ್ತಾರೆ.
ಖಾಸಗಿ ವಾಹನಗಳ ಚಾಲನೆ ಅಷ್ಚೇ ಅಲ್ಲದೆ ಕಮರ್ಷಿಯಲ್ ವಾಹನಗಳನ್ನು ಓಡಿಸುವ ಮಹಿಳೆಯರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಶ್ರಮಿಸುತ್ತಿರುವ ಹಲವು ಸಂಘಸಂಸ್ಥೆಗಳು ಅರ್ಹ ಸ್ತ್ರೀಯರಿಗೆ ಚಾಲನಾ ತರಬೇತಿ ನೀಡಿ ಅವರನ್ನು ವೃತ್ತಿಪರ ಚಾಲಕರನ್ನಾಗಿ ರೂಪಿಸುತ್ತಿವೆ. ಹೀಗಾಗಿಯೇ ಈ ಹಿಂದೆ ತುಂಬಾ ವಿರಳ ಸಂಖ್ಯೆಯಲ್ಲಿದ್ದ ಮಹಿಳಾ ಚಾಲಕರ ಸಂಖ್ಯೆ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದೆ.
ಇದೇ ವರ್ಷಾರಂಭದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಪಿಂಕ್ ಕ್ಯಾಬ್ ಸೇವೆ ಆರಂಭಿಸಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಏರ್‌ಪೋರ್ಟ್ ಸಹಯೋಗದಲ್ಲಿ ಈ ಸೇವೆ ಆರಂಭವಾದ ನಂತರ ಇನ್ನಿತರೆ ಖಾಸಗಿ ಟ್ಯಾಕ್ಸಿ ಸೇವಾ ಸಂಸ್ಥೆಗಳಾದ ಓಲಾ, ಉಬರ್ ಕೂಡ ತಮ್ಮ ಸೇವೆಯಲ್ಲಿ ಪಿಂಕ್ ಕ್ಯಾಬ್ ಸೌಲಭ್ಯ ನೀಡುತ್ತಿವೆ. ನಗರದಲ್ಲಿ ಮಹಿಳೆಯರ ಪ್ರಯಾಣಕ್ಕೆ ಶೇ.100 ರಷ್ಟು ಸುರಕ್ಷತೆ ಕೊಡುತ್ತೇವೆ ಎಂಬ ನಿಟ್ಟಿನಲ್ಲಿ ಆರಂಭವಾಗಿರುವ ಪಿಂಕ್ ಕ್ಯಾಬ್, ವಿಮೆನ್ ಕ್ಯಾಬ್ಸ್ ನಂತಹ ಸಂಸ್ಥೆಗಳು ಗ್ರಾಮೀಣ ಭಾಗದ ಬಡ ಮಹಿಳೆಯರನ್ನು ಚಾಲಕ ವೃತ್ತಿ ಕಡೆಗೆ ಆಕರ್ಷಿತವಾಗುವಂತೆ ಮಾಡಿವೆ.
ವರ್ಷ - ಡಿಎಲ್ ಪಡೆದುಕೊಂಡ ಮಹಿಳೆಯರ ಒಟ್ಟು ಸಂಖ್ಯೆ
2015 - 17.3 ಲಕ್ಷ
2016 - 19.7 ಲಕ್ಷ
2017 - 21.8 ಲಕ್ಷ
2018 - 23.6 ಲಕ್ಷ
2019 - 26.3 ಲಕ್ಷ