ಬಿಜೆಪಿ ಸರಕಾರಕ್ಕೆ ಜನರ ಸಮಸ್ಯೆ ಪರಿಹರಿಸಬೇಕೆಂಬ ವಿವೇಚನವಿಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2019-10-06 14:48 GMT

ಕಳಸ, ಅ.6: ರಾಜ್ಯದ ಬಿಜೆಪಿ ಸರಕಾರ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಸರಕಾರದಲ್ಲಿ ಸಚಿವರುಗಳೇ ಇಲ್ಲ. ಅತಿವೃಷ್ಟಿಯಂತಹ ಗಂಭೀರ ಸಮಸ್ಯೆ ತಲೆದೋರಿರುವ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎನ್ನುವ ವಿವೇಚನೆಯೂ ಸರಕಾರಕ್ಕಿಲ್ಲ. ಬಿಜೆಪಿ ಸರಕಾರಕ್ಕೆ ನಿಜವಾಗಿಯೂ ರೈತರು, ಜನರ ಬಗ್ಗೆ ಕಾಳಜಿ ಇದ್ದಲ್ಲಿ ಅತಿವೃಷ್ಟಿ ಪರಿಹಾರದಂತಹ ಗಂಭೀರ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಸಂತ್ರಸ್ತರ ಪಾಲಿಗೆ ಆಸರೆಯಾಗಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕಳಸ ಭಾಗದಲ್ಲಿ ನೆರೆಯಿಂದ ಹಾನಿಯಾಗಿ ಪರಿಹಾರ ಸಿಗದೆ ಇರುವ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಾದ ಚೆನ್ನಪ್ಪಗೌಡ ಹಾಗೂ ಚಂದ್ರೇಗೌಡ ಮನೆಗಳಿಗೆ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರಿಗೆ ನೀಡುವ ನೆರೆ ಪರಿಹಾರದಲ್ಲಿ ಹುಡುಗಾಟ ಆಡಬಾರದು. ಸರಕಾರದ ಮಂತ್ರಿಗಳು ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಬೇಕು. ಅಧಿಕಾರಿಗಳಿಂದ ಪ್ರೀತಿಯಿಂದ ಕೆಲಸ ಮಾಡಿಸಿಕೊಂಡು ತೊಂದರೆಗೆ ಒಳಗಾದ ರೈತರಿಗೆ ನ್ಯಾಯಯುತವಾತ ಪರಿಹಾರ ನೀಡಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದರು.

ರೈತರ ಪರಿಹಾರ ಧನದಲ್ಲಿ ದುಡ್ಡು ಹೊಡೆಯುವ ಕೆಲಸ ಮಾಡಬಾರದು. ಈಗಾಗಲೇ ಈ ಭಾಗದಲ್ಲಿ ಸರಕಾರ ಕೊಟ್ಟಿರುವ 10 ಸಾವಿರ ರೂ. ಪರಿಹಾರದ ಚೆಕ್ ಕೆಲ ಬಿಜೆಪಿ ಕಾರ್ಯಕರ್ತರ ಪಾಲಾಗಿವೆ ಎಂದು ಸಂತ್ರಸ್ತರು ದೂರುತ್ತಿದ್ದು, ಪರಿಹಾರದ ಹಣದಲ್ಲೂ ಕಮಿಷನ್ ತೆಗೆದುಕೊಂಡಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪರಿಹಾರದ ಹಣವನ್ನೂ ಲೂಟಿ ಮಾಡಿ ಸರಕಾರ ಖಜಾನೆ ಖಾಲಿಯಾಗಿದೆ ಎಂದು ಹೇಳೋದು ಬೇಡ. ರಾಜ್ಯದ ಖಜಾನೆ ಯಾವತ್ತೂ ಸುಭದ್ರವಾಗಿರುತ್ತದೆ. ಖಜಾನೆಗೆ ತೆರಿಗೆ ಹಣ ನಿರಂತರವಾಗಿ ಬರುತ್ತಿದೆ. ಯಾವ ಸರಕಾರಕ್ಕೂ ಖಜಾನೆ ಖಾಲಿಯಾಗುವ ಪ್ರಮೇಯ ಬರುವುದಿಲ್ಲ. ರೈತರ ಸಮಸ್ಯೆಗಳನ್ನು ಯಾವ ರೀತಿ ಸ್ಪಂದಿಸಬೇಕು ಎನ್ನುವ ವಿವೇಚನೆ ಈ ಸರಕಾರಕ್ಕಿಲ್ಲ. ನನ್ನ ಆಡಳಿತದಲ್ಲಿಯೇ ರೈತರ ಸಾಲ ಮನ್ನಾಕ್ಕೆ 29 ಸಾವಿರ ಕೋಟಿ ರೂ. ಮಂಜೂರು ಮಾಡಿದ್ದೇನೆ ಎಂದರು.

ಸಚಿವ ಮಾಧುಸ್ವಾಮಿ 'ಸರಕಾರದ ಬಳಿ ಹಣದ ಕೊರತೆ ಇಲ್ಲ, ಪರಿಹಾರಕ್ಕೆ ಮನವಿ ಕೊಡುವವರೇ ಇಲ್ಲ' ಎನ್ನುವ ಉದ್ಧಟನದ ಹೇಳಿಕೆಯನ್ನು ನೀಡುತ್ತಿದ್ದಾರೆ. ಕಳಸದಂತಹ ಒಂದು ಬಾಗದಲ್ಲಿಯೇ 500ಕ್ಕೂ ಹೆಚ್ಚು ಸಂತ್ರಸ್ತ ಕುಟುಂಬಗಳಿವೆ. ಸಾವಿರಾರು ಹೆಕ್ಟರ್ ಭೂಮಿ ನಾಶವಾಗಿದೆ. ಈ ಸರಕಾರಕ್ಕೆ ಇನ್ನೂ ಕೂಡ ಸರಿಯಾದ ಮಾಹಿತಿಯನ್ನೇ ಸಂಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇರುತ್ತಿದ್ದರೆ ಕೊಡಗಿಗೆ ಪರಿಹಾರ ನೀಡಿದ ರೀತಿಯಲ್ಲಿ 10 ಸಾವಿರ ಕೋಟಿ ಕೂಡಲೇ ಮಂಜೂರು ಮಾಡಿ ತೋರಿಸುತ್ತಿದ್ದೆ ಎಂದರು. 

ಎಚ್ಡಿಕೆ ರಾಜಕೀಯ ನಿವೃತ್ತಿ ಪಡೆಯಲಿ ಎಂಬ ಚಲುವರಾಯ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚಲುವರಾಯಸ್ವಾಮಿ ಸಲಹೆ ಕೇಳಿ ರಾಜಕೀಯ ಮಾಡಬೇಕಿಲ್ಲ. ಚಲುವರಾಯ ಸ್ವಾಮಿ ಬೇಕಿದ್ದರೇ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಲಿ ಎಂದ ಅವರು ನಾನು ದಿನಕ್ಕೊಂದು ಪಕ್ಷ ಬದಲಾಯಿಸುವುದಿಲ್ಲ. ಡೇಟೈಮ್ ಒಂದು ಪಕ್ಷದ ಮನೆಯಲ್ಲಿ ರಾತ್ರಿ ಬೇರೆ ಪಕ್ಷದವರ ಮನೆಗೆ ಹೋಗುವುದಿಲ್ಲ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಈ ಭಾಗಕ್ಕೆ ಭೇಟಿ ನೀಡಿ ನೊಂದ ರೈತರ ಸಮಸ್ಯೆ ಕೇಳಲಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಶೋಭಾ ಕರಂದ್ಲಾಜೆಗೆ ರೈತರು ಅಂದ್ರೆ ಯಾರು ಅಂತಾ ಗೊತ್ತಿದೆಯೇ? ರೈತರ ಕಷ್ಟ, ಅವರ ಸಮಸ್ಯೆ ಏನೆಂದು ಗೊತ್ತಿದೆಯಾ? ರೈತರನ್ನು ಕಟ್ಕೊಂಡು ಅವರಿಗೇನಾಗಬೇಕು? ಅವರೇನಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರು ಎಂದು ಪ್ರತಿಕ್ರಿಯಿಸಿದರು. .

ಮೈತ್ರಿ ಸರಕಾರ ಖಜಾನೆ ಲೂಟಿ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಸರಕಾರ ಖಜಾನೆ ಖಾಲಿ ಮಾಡಿದೆ ಎನ್ನಲು ನಾನು ದರೋಡೆಕೋರನಲ್ಲ. ಖಜಾನೆ ಖಾಲಿ ಮಾಡಿದ್ದರೆ ಸಿಬಿಐ ತನಿಖೆ ಮಾಡಿಸಲಿ ಎಂದು ಕುಮಾರಸ್ವಾಮಿ ಖಾರವಾಗಿ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರಾದ ಎಸ್.ಎಲ್.ಬೋಜೇಗೌಡ, ಎಸ್.ಎಲ್.ಧರ್ಮೇಗೌಡ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜಿಲ್ಲಾಧ್ಯಕ್ಷ ಅಜಿತ್ ರಂಜನ್ ಕುಮಾರ್, ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ, ಮುಖಂಡರಾದ ದೇವರಾಜ್, ಮಹಮ್ಮದ್ ರಫೀಕ್, ಜಿ.ಕೆ.ಮಂಜಪ್ಪಯ್ಯ, ಬಿ.ಎಲ್.ಸಂದೀಪ್, ಆಶಾಲತಾ ಜೈನ್, ಸಂತೋಷ್ ಹಿನಾರಿ, ರತ್ನಾಕರ ಗೌಡ, ಬ್ರಹ್ಮದೇವ, ರವಿ ರೈ, ಅವಿನಾಶ್, ಸುಜಿತ್, ಅನಿಲ್ ಗ್ಯಾವಿನ್, ರವಿ ಕಳಕ್ಕೋಡು ಮತ್ತಿತರರು ಉಪಸ್ಥಿತರಿದ್ದರು.

ನನ್ನ ಅವಧಿಯಲ್ಲಿ ಬಂದಿರುವ ನನ್ನ ಸಂಬಳದಲ್ಲಿ ನಾನು ವೈಯಕ್ತಿಕವಾಗಿ ಆತ್ಮಹತ್ಯೆ ಮಾಡಿಕೊಂಡ ರೈತ ಚಂದ್ರೇಗೌಡ ಅವರ ಕುಟುಂಬಕ್ಕೆ 2 ಲಕ್ಷ ರೂ., ಚನ್ನಪ್ಪಗೌಡ ಕುಟುಂಬಕ್ಕೆ 1ಲಕ್ಷ ರೂ. ಹಾಗೂ ಜಮೀನು ಮನೆ ಕಳೆದುಕೊಂಡ 38 ಕುಟುಂಬಗಳಿಗೆ ತಲಾ 10 ಸಾವಿರದಂತೆ ನೆರವು ನೀಡಿದ್ದೇನೆ. ನಾನು ಯಾವುದೇ ಪ್ರಚಾರಕ್ಕಾಗಿ ಪರಿಹಾರವನ್ನು ನೀಡುತ್ತಿಲ್ಲ. ಸರಕಾರಕ್ಕೆ ಜ್ಞಾನೋದಯವಾಗಲಿ ಎಂದು ಪರಿಹಾರ ನೀಡುತ್ತಿದ್ದೇನೆ.
- ಎ.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News