ಹಾಲಿನ ವಾಹನ ತಡೆದು ದರೋಡೆಗೈದ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2019-10-06 18:01 GMT

ದಾವಣಗೆರೆ, ಅ.6: ಹಾಲಿನ ವಾಹನ ತಡೆದು ದರೋಡೆ ಮಾಡಿದ್ದ ನಾಲ್ವರು ಕುಖ್ಯಾತ ದರೋಡೆಕೋರರನ್ನು ಬಂಧಿಸಿ, 1.33 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ ಬೈಕ್‍ನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಜಪ್ತು ಮಾಡಿದ್ದಾರೆ. 

ಭರಮ ಸಾಗರದ ಅನಿಲ್ ಕುಮಾರ್, ದಿನೇಶ್, ರಾಕೇಶ್ ಹಾಗೂ ಲೋಹಿತ್ ಬಂಧಿತ ಆರೋಪಿಗಳು. ಅ.1ರ ಮಧ್ಯಾಹ್ನ ಆನಗೋಡು ಗ್ರಾಮದ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದ ಬಳಿ ವಿನಾಯಕ, ಅನಿಲ್ ಎಂಬವರು ಐಷರ್ ವಾಹನದಲ್ಲಿ ಹಿರಿಯೂರಿಗೆ ನಂದಿನಿ ಹಾಲು ಕೊಟ್ಟು, ಸಂಗ್ರಹಿಸಿದ್ದ ಹಣದ ಸಮೇತ ವಾಪಾಸ್ಸಾಗುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ನಾಲ್ವರು ದರೋಡೆಕೋರರು ಐಷರ್ ವಾಹನದಲ್ಲಿದ್ದವರ ಕಣ್ಣಿಗೆ ಖಾರದ ಪುಡಿಯನ್ನು ಎರಚಿ, ಹಾಲಿನ ವಾಹನದಲ್ಲಿದ್ದ 1.40 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ. 

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಹನುಮಂತರಾಯ, ಎಎಸ್ಪಿ ಎಂ.ರಾಜೀವ್ ಮಾರ್ಗದರ್ಶನದಲ್ಲಿ ಡಿಎಸ್ವಿ ಎಂ.ಕೆ.ಗಂಗಲ್, ಸಿಪಿಐ ಎಚ್.ಗುರುಬಸವರಾಜ, ಎಸ್‍ಐ ಸಂಜೀವಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ, ಸಂತೋಷ್ ಕುಮಾರ್, ಹನುಮಂತಪ್ಪ ತಂಡವು ಭರಮಸಾಗರದ ಅಂತರ್ಜಿಲ್ಲಾ ದರೋಡೆಕೋರರ ತಂಡವನ್ನು ಬಂಧಿಸಿ, 1.33 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News