ಕುಮಾರಸ್ವಾಮಿ ಆಡಳಿತದಲ್ಲಿ ಮಂಡ್ಯ ಅಭಿವೃದ್ಧಿ ಆಗಿಲ್ಲ: ಮಾಜಿ ಸಚಿವ ಎನ್.ಚಲುವರಾಯಸ್ವಾಮಿ

Update: 2019-10-06 18:05 GMT

ಮಂಡ್ಯ, ಅ.6: ಮಾಜಿ ಮುಖ್ಯಮಂತ್ರಿ ತನ್ನ 14 ತಿಂಗಳ ಆಡಳಿತದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ಈಗ ಮತ್ತೆ ಜಿಲ್ಲೆಯ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಬಂದಿದ್ದಾರೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದ್ದಾರೆ.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಮತ್ತು ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆಗಳು ಮುಚ್ಚಲು ಕುಮಾರಸ್ವಾಮಿಯೇ ಕಾರಣ. ಅವುಗಳ ಆರಂಭಕ್ಕೆ ಪ್ರಯತ್ನವನ್ನೇ ಮಾಡಲಿಲ್ಲ ಎಂದು ದೂರಿದರು.

ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರು. ಅವರು ಮುಖ್ಯಮಂತ್ರಿಯಾಗಲು ಮಂಡ್ಯ ಜಿಲ್ಲೆಯ ಜನತೆ ಪ್ರಮುಖ ಕಾರಣ. ಆದರೆ, ತಮ್ಮ ಆಡಳಿತದಲ್ಲಿ ಜಿಲ್ಲೆಯ ಜನರ ಪರವಾದ ಕೆಲಸಗಳು ನಡೆದೇ ಇಲ್ಲ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಯ ಜನರ ಅನುಕಂಪ ಪಡೆಯಲು ಯತ್ನಿಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯ ರೈತರು ಮತ್ತು ಅಭಿವೃದ್ಧಿ ಕುರಿತಂತೆ ಮಾತನಾಡುತ್ತಿದ್ದಾರೆ. ಜಿಲ್ಲೆಯ ಜನರು ಎಚ್ಚರದಿಂದ ಇರಬೇಕು ಎಂದು ಅವರು ಸಲಹೆ ನೀಡಿದರು.

ತಾನು ಸಿಎಂ ಆಗಿದ್ದಾಗ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ 8 ಸಾವಿರ ಕೋಟಿ ಅನುದಾನವನ್ನು ಇಂದಿನ ರಾಜ್ಯ ಸರಕಾರ ತಡೆಹಿಡಿದಿದೆ ಎನ್ನುವ ಕುಮಾರಸ್ವಾಮಿ, ಆ ಬಗ್ಗೆ ವಿಧಾನಸೌಧದ ಮುಂದೆ ಪ್ರತಿಭಟಿಸಲಿ ಎಂದರು. ಜಿಲ್ಲೆಯ ಅಭಿವೃದ್ಧಿಗೆ ತಾನು 8 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ ಎನ್ನುವ ಕುಮಾರಸ್ವಾಮಿ ಅವರು, ತನ್ನ 14 ತಿಂಗಳ ಅವಧಿಯಲ್ಲಿ ಆ ಅನುದಾನವನ್ನು ಅಭಿವೃದ್ಧಿಗೆ ಬಳಸಿಕೊಳ್ಳಲಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು.

ಈಗ ಜಿಲ್ಲೆಯಲ್ಲಿ ನಡೆಯುತ್ತಿರುವ ರಸ್ತೆ ಮತ್ತಿತರ ಕಾಮಗಾರಿಗಳು ಸಿದ್ದರಾಮಯ್ಯನವರ ಸರಕಾರದ ಆಡಳಿತದ ಅವಧಿಯದ್ದು ಎಂದ ಅವರು, ಸುಳ್ಳು ಹೇಳಿದರೆ ಜನ ನಂಬೋದಿಲ್ಲ. ಇನ್ನಾದರೂ ಕುಮಾರಸ್ವಾಮಿ ಜನರಿಗೆ ಮಂಕುಬೂದಿ ಎರಚುವುದನ್ನು ಬಿಡಬೇಕು ಎಂದರು.

ಅವರ ಶಾಸಕರು ಏನು ಮಾಡುತ್ತಿದ್ದಾರೆ?

ಕುಮಾರಸ್ವಾಮಿ ಎಲ್ಲದಕ್ಕೂ ಸಂಸದೆ ಸುಮಲತಾ ಅವರನ್ನೇ ಟಾರ್ಗೆಟ್ ಮಾಡುತ್ತಾರೆ. ಸ್ವಾಭಿಮಾನಕ್ಕೆ ವೋಟು ಪಡೆದವರು ಇನ್ನೂ ನ್ಯೂಯಾರ್ಕಿನಲ್ಲಿದ್ದಾರ ಎಂದು ವ್ಯಂಗ್ಯ ಮಾಡುತ್ತಾರೆ. ಹಾಗಾದರೆ, ಜಿಲ್ಲೆಯ ಇವರ ಪಕ್ಷದ ಏಳು ಮಂದಿ ಶಾಸಕರು ಏನು ಮಾಡುತ್ತಿದ್ದಾರೆ ಎಂದು  ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಜಿಲ್ಲೆಯ ಸಮಸ್ಯೆ ಬಗೆಹರಿಸುವ ಜವಾಬ್ಧಾರಿ ಸಂಸದರಿಗೂ ಇದೆ ಗೊತ್ತು. ಆದರೆ, ಎಲ್ಲಕ್ಕೂ ಅವರ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ. ಸುಮಲತಾ ಅವರೂ ರಾಜ್ಯ ಸರಕಾರದೊಂದಿಗೆ ಸಂಪರ್ಕ ಇಟ್ಟುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಅವರು ಸಲಹೆ ನೀಡಿದರು.

ನಾನು ಸಿಎಂ ಯಡಿಯೂರಪ್ಪ, ಯೋಗೇಶ್ವರ್ ಜೊತೆ ಚೆನ್ನಾಗಿ ಇದ್ದೇನೆ. ಅದೇ ರೀತಿ ಜೆಡಿಎಸ್‍ನ ಕೆಲ ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದೇನೆ. ರಾತ್ರಿ ಯಡಿಯೂರಪ್ಪ ಮನೆಗೆ ಯಾಕೆ ಹೋಗಲಿ? ಬೇಕಾದರೆ ಬೆಳಗ್ಗೆಯೇ ಹೋಗುತ್ತೇವೆ. ಜಿಲ್ಲೆಯ ಸಮಸ್ಯೆ ಕುರಿತು ಚರ್ಚೆ ಮಾಡುತ್ತೇವೆ. ಕೆಲವು ಕೆಲಸಗಳನ್ನು ಮಾಡಿಸುತ್ತಿದ್ದೇವೆ ಎಂದು ಆರೋಪಕ್ಕೆ ಪ್ರತಿಕ್ರಿಯಿಸಿದರು.

ಮಾಜಿ ಶಾಸಕ ಎಚ್.ಬಿ.ರಾಮು, ಕಾಂಗ್ರೆಸ್ ಮುಖಂಡರಾದ ಸಿ.ಎಂ.ದ್ಯಾವಪ್ಪ, ಸಿ.ಕೆ.ತ್ಯಾಗರಾಜು, ಕಂಬದಹಳ್ಳಿ ಪುಟ್ಟಸ್ವಾಮಿ ಹಾಗು ಅಜ್ಜಹಳ್ಳಿ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News