​ಭಾರತಕ್ಕೂ ಒಂದು "ಗ್ರೇಟ್ ಗ್ರೀನ್ ವಾಲ್"

Update: 2019-10-09 03:38 GMT

ಹೊಸದಿಲ್ಲಿ : ಹವಾಮಾನ ಬದಲಾವಣೆ ಮತ್ತು ಮರುಭೂಮೀಕರಣವನ್ನು ತಡೆಯುವ ನಿಟ್ಟಿನಲ್ಲಿ ಗುಜರಾತ್‌ನಿಂದ ದೆಹಲಿ- ಹರ್ಯಾಣ ಗಡಿವರೆಗೆ ಒಟ್ಟು 1400 ಕಿಲೋಮೀಟರ್ ಉದ್ದ ಹಾಗೂ 5 ಕಿಲೋಮೀಟರ್ ವಿಸ್ತಾರದ ಹಸಿರುಪಟ್ಟಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ.

ಸೆನೆಗಲ್‌ನ ದಕರ್‌ನಿಂದ ದಿಜಿಬೋಟಿವರೆಗೆ ಆಫ್ರಿಕದುದ್ದಕ್ಕೂ ಬೆಳೆಸಲು ಉದ್ದೇಶಿಸಿರುವ "ಗ್ರೇಟ್ ಗ್ರೀನ್ ವಾಲ್" ಮಾದರಿಯಲ್ಲಿ ಈ ಹಸಿರುಪಟ್ಟಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಈ ಮಹತ್ವಾಕಾಂಕ್ಷಿ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಇದಕ್ಕೆ ಅನುಮೋದನೆ ದೊರಕಿದಲ್ಲಿ, ಭೂಮಿಯ ಗುಣಮಟ್ಟ ಕುಸಿತ ಮತ್ತು ಥಾರ್‌ಮರುಭೂಮಿ ಪೂರ್ವಾಭಿಮುಖವಾಗಿ ಬೆಳೆಯುವುದನ್ನು ತಡೆಯುವ ಮಹತ್ವದ ಯೋಜನೆಯಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಈ ಮೆಗಾ ಯೋಜನೆ ಈಗಾಗಲೇ ವಿವಿಧ ಸಚಿವಾಲಯಗಳ ಉನ್ನತ ಅಧಿಕಾರಿಗಳಲ್ಲಿ ಸಂಚಲನ ಮೂಡಿಸಿದೆ.

ಪೋರಬಂದರ್‌ನಿಂದ ಪಾಣಿಪತ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ ಈ ಹಸಿರುಪಟ್ಟಿ, ಅರವಲಿ ಬೆಟ್ಟ ಶ್ರೇಣಿಯಲ್ಲಿ ಅಂದರೆ ಗುಜರಾತ್, ರಾಜಸ್ಥಾನ, ಹರ್ಯಾಣ ಮತ್ತು ದೆಹಲಿವರೆಗೆ ಅರಣ್ಯ ಬೆಳೆಸುವ ಮೂಲಕ ಭೂಗುಣಮಟ್ಟ ಕುಸಿತ ತಡೆಯಲು ನೆರವಾಗುವುದು ಮಾತ್ರವಲ್ಲದೇ, ಪಶ್ಚಿಮ ಭಾರತ ಹಾಗೂ ಪಾಕಿಸ್ತಾನದಿಂದ ಬರುವ ದೂಳನ್ನು ತಡೆಯುವಲ್ಲಿ ಕೂಡಾ ನೆರವಾಗಲಿದೆ ಎನ್ನುವುದು ಅಧಿಕಾರಿಗಳ ಅಭಿಮತ.

ಭಾರತದಲ್ಲಿ ಅರಣ್ಯ ನಾಶವನ್ನು ತಡೆಯುವ ನಿಟ್ಟಿನಲ್ಲಿ ನಡೆದ ಸಿಒಪಿ14 ಸಮ್ಮೇಳನದ ಕಾರ್ಯಸೂಚಿಗೆ ಅನುಗುಣವಾಗಿ ಈ ಬೃಹತ್ ಹಸಿರು ಪಟ್ಟಿ ಬೆಳೆಸುವ ಯೋಜನೆ ರೂಪಿಸಲಾಗಿದೆ. ಆದರೆ ಇದಕ್ಕೆ ಅಂತಿಮ ಒಪ್ಪಿಗೆ ಸಿಗಬೇಕಾಗಿರುವ ಕಾರಣ ತಕ್ಷಣಕ್ಕೆ ಅನುಷ್ಠಾನಕ್ಕೆ ತರುವಂತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಆಫ್ರಿಕಾದ ಗ್ರೇಟ್ ಗ್ರೀನ್ ವಾಲ್ ಪ್ರಸ್ತಾವ ದಶಕದ ಹಿಂದೆಯೇ ಚಾಲನೆ ಪಡೆದಿದ್ದರೂ, ಇದರ ಅನುಷ್ಠಾನಕ್ಕೆ ಹಲವು ದೇಶಗಳ ಪಾಲ್ಗೊಳ್ಳುವಿಕೆ ಅಗತ್ಯತೆ ಹಿನ್ನೆಲೆಯಲ್ಲಿ ಇನ್ನೂ ಕಾರ್ಯ ಆರಂಭವಾಗಿಲ್ಲ. ಆದರೆ ಭಾರತ ಇದನ್ನು ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸಿ, 26 ದಶಲಕ್ಷ ಹೆಕ್ಟೇರ್ ಭೂಭಾಗದ ಗುಣಮಟ್ಟ ಕುಸಿಯುವುದನ್ನು 2030ರೊಳಗೆ ತಡೆಯುವ ಉದ್ದೇಶ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News