ಪೊಲೀಸರ ಬಳಿ ಸಂಸದ ಪ್ರತಾಪ್ ಸಿಂಹ ಕ್ಷಮೆಯಾಚನೆ

Update: 2019-10-09 11:02 GMT

ಮೈಸೂರು:  ವಿಜಯದಶಮಿಗೂ ಮೊದಲು ಚಾಮುಂಡಿ ಬೆಟ್ಟದಲ್ಲಿ ತಾನು ಪೊಲೀಸರಿಗೆ ಅವಮಾನಕಾರಿಯಾಗಿ ಮಾತಾಡಿದ್ದಕ್ಕೆ  ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ಅವರ ಬಳಿ ಕ್ಷಮೆಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಬುಧವಾರ ಪತ್ರಕರ್ತರ ಜತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ದಸರಾ ಹಬ್ಬದ ಆಚರಣೆ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಇಡೀ ಪೊಲೀಸ್‌ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ.  “ಕಾನ್‌ಸ್ಟೇಬಲ್‌ನಿಂದ ಕಮೀಷನರ್  ವರೆಗೂ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮಾಧ್ಯಮದವರು ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳಬೇಡಿ. ಏಕೆಂದರೆ ಸೆ. 27ರಂದು ಚಾಮುಂಡಿಗೆ ಪುಷ್ಪಾರ್ಚನೆ ಮಾಡಿ ನಮ್ಮ ಅಧಿದೇವತೆ ಎಂದು ನಾವು ಹೊತ್ತು ಮೆರೆಯುತ್ತೇವೆ. ಹಾಗೆಯೇ ಚಾಮುಂಡಿಗೆ ಅವಳು, ಇವಳು ಎಂದು ಮಾತನಾಡಿ ಪುಷ್ಪಾರ್ಚನೆ ಮಾಡಿದರೆ ಆ ದೇವರು ಹಾಗೂ ಸಮಾಜ ಮೆಚ್ಚುವುದಿಲ್ಲ.  ಇದಕ್ಕೆ ತಡೆ ಒಡ್ಡುವ ಕೆಲಸವನ್ನು ನಾವು ಮಾಡಿದ್ದೇವೆ ಇದಕ್ಕೆ ವಿಪರೀತ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ನಾನು ಅವತ್ತು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ಮನಸ್ಸಿಗೆ ನೋವಾಯಿತು, ಘಾಸಿ ಆಯಿತು. ಶಾಮಿಯಾನ ಹಾಕಿ ಅಪಚಾರ ಮಾಡಲು ಹೊರಟಿರುವುದನ್ನು ಕಂಡು ಅವೇಶಭರಿತನಾಗಿ ಮಾತನಾಡಿದ್ದೇನೆ. ಈಗಾಗಲೇ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹಾಗೂ ಡಿಸಿಪಿ ಮುತ್ತುರಾಜ್ ಅವರ ಬಳಿ ವೈಯಕ್ತಿಕವಾಗಿ ಕ್ಷಮೆ ಯಾಚಿಸಿದ್ದೇನೆ.  ಆ ಸಂದರ್ಭದಲ್ಲಿ ನಾನು ಆವೇಶದಲ್ಲಿ ಈ ರೀತಿ ಮಾತನಾಡಿದ್ದೇನೆ ಕ್ಷಮಿಸಿ ಎಂದು ಕೇಳಿದ್ದೇನೆ. ನಾವೆಲ್ಲ ಒಂದೇ ಕುಟುಂಬದಂತೆ ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದರು.

ಸೆ. 27 ರಂದು ಬೆಟ್ಟದ ಮೇಲಿನ ಮಹಿಷಾಸುರ ಮೂರ್ತಿ ಬಳಿ ಮಹಿಷ ದಸರಾ ನಡೆಸುವ ಸಲುವಾಗಿ ಶಾಮಿಯಾನ, ವೇದಿಕೆ ಹಾಕಿ ತಯಾರಿ ಮಾಡಲಾಗುತ್ತಿತ್ತು. ಈ ವಿಷಯ ತಿಳಿದು ಪ್ರತಾಪ್ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ವೇದಿಕೆ ಹಾಕೋದಕ್ಕೆ ಯಾರು ನಿಮಗೆ ಅನುಮತಿ ಕೊಟ್ಟರು? ಇದನ್ನು ಮೊದಲು ಇಲ್ಲಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಹಾಕಲು ನೀವು ಏಕೆ ಅನುಮತಿ ನೀಡಿದ್ದೀರ ಪೊಲೀಸರೆ, ನಿಮ್ಮಿಂದ ಇಂತಹ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದ ವೀಡಿಯೊ ವೈರಲ್ ಆಗಿತ್ತು.

ಈ ವೇಳೆ ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಗ್ರಾಮ ಪಂಚಾಯತ್ ಅವರು ಮಾಡಿರುವ ಕೆಲಸ ಎಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದರು.

ದಸರಾ ಉತ್ಸವ ಕಾರ್ಯಕ್ರಮಗಳಿಗೆ ವೇದಿಕೆ ಹಾಕುವ ಶಾಮಿಯಾನ ಮಾಲಕ ಶಫಿ ನೇತೃತ್ವದಲ್ಲಿ ಈ ವೇದಿಕೆ ಹಾಕಲಾಗಿತ್ತು. ಹೀಗಾಗಿ ಕೂಡಲೇ ಟ್ರಕ್ ತಂದು ಇದನ್ನು ತೆರವುಗೊಳಿಸಬೇಕು. ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸುತ್ತೇನೆಂದು ಶಾಮಿಯಾನ ಮಾಲಕರಿಗೆ ಪ್ರತಾಪ್ ಸಿಂಹ ಬೆದರಿಕೆ ಹಾಕಿದ್ದರು ಎನ್ನಲಾಗಿದ್ದು, ನಂತರ ಶಾಮಿಯಾನ ತೆರವುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News