ಶಿವಮೊಗ್ಗ: ರಾಷ್ಟ್ರಕೂಟರ ತುರುಗೋಳು, ಹೊಯ್ಸಳರ ನಂದಿಪೀಠ ಶಾಸನ ಪತ್ತೆ

Update: 2019-10-09 12:13 GMT

ಶಿವಮೊಗ್ಗ, ಅ. 9: ಭದ್ರಾವತಿ ತಾಲೂಕಿನ ತಡಸ ಗ್ರಾಮದಲ್ಲಿ ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಕೈಗೊಂಡ ಕ್ಷೇತ್ರಕಾರ್ಯದಲ್ಲಿ ರಾಷ್ಟ್ರಕೂಟರ ಕಾಲದ ಕ್ರಿ.ಶ.10ನೇ ಶತಮಾನದ ತುರುಗೋಳು ವೀರಗಲ್ಲು ಶಾಸನ ಮತ್ತು ಹೊಯ್ಸಳದ ಕಾಲದ ಕ್ರಿ.ಶ. 13ನೇ ಶತಮಾನದ ನಂದಿಪೀಠ ಶಾಸನ ಪತ್ತೆಯಾಗಿದೆ.

ರಾಷ್ಟ್ರಕೂಟರ ಕಾಲದ ತುರುಗೋಳು ವೀರಗಲ್ಲು ಶಾಸನ: ತಡಸ ಗ್ರಾಮದ ಮಧ್ಯದಲ್ಲಿ ತುರುಗೋಳು ವೀರಗಲ್ಲು ಶಾಸನ ಪತ್ತೆಯಾಗಿದ್ದು, ಇದು ಗ್ರಾನೈಟ್ ಶಿಲೆಯಿಂದ ಕೆತ್ತಲ್ಪಟ್ಟಿದ್ದು, ಒಂದೂವರೆ ಮೀಟರ್ ಉದ್ದ ಹಾಗೂ 65ಸೆಂ.ಮೀ. ಅಗಲವಾಗಿದ್ದು, ಹಳೆಗನ್ನಡ ಶಾಸನವನ್ನು ಹೊಂದಿದೆ. ಈ ಶಿಲ್ಪವು ಮೂರು ಪಟ್ಟಿಕೆಗಳಿಂದ ಕೂಡಿದ್ದು, ವೀರಗಲ್ಲಿನ ಸುತ್ತಲೂ ಶಾಸನವನ್ನು ಕಾಣಬಹುದಾಗಿದೆ.

ಶಿಲ್ಪದ ವಿವರ: ಮೊದಲ ಪಟ್ಟಿಕೆಯಲ್ಲಿ ವೀರನು ಬಿಲ್ಲು-ಬಾಣಗಳನ್ನು ಹಿಡಿದು ಹೋರಾಡುತ್ತಿರುವುದು, ವೀರನ ಸುತ್ತ ಗೋವುಗಳು ನಿಂತಿರುವುದು. ಒಬ್ಬ ಶತ್ರುವು ಕೆಳಗೆ ಬಿದ್ದಿದ್ದು, ಇನ್ನೊಬ್ಬ ಶತ್ರು ವೀರನೊಂದಿಗೆ ಬಿಲ್ಲು ಬಾಣವನ್ನು ಹಿಡಿದು ಹೋರಾಡುತ್ತಿರುವುದು ಕಂಡುರುತ್ತದೆ.
ಎರಡನೇ ಪಟ್ಟಿಕೆಯಲ್ಲಿ ಇಬ್ಬರು ಅಪ್ಸರೆಯರು ವೀರನನ್ನು ತಮ್ಮ ತೋಳುಗಳಲ್ಲಿ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಮೂರನೇ ಪಟ್ಟಿಕೆಯಲ್ಲಿ ವೀರನು ಪೀಠದ ಮೇಲೆ ಕುಳಿತಿರುವುದು ಅಂದರೆ ಇಲ್ಲಿ ಅವನು ಸ್ವರ್ಗಸ್ಥನಾಗಿರುವ ಕಲ್ಪನೆ ಕಂಡುಬರುತ್ತದೆ. ಪಕ್ಕದಲ್ಲಿ ಚಾಮರಧಾರಣಿಯರು ಚಾಮರ ಹಿಡಿದು ನಿಂತಿರುವುದು ಕಂಡುಬರುತ್ತದೆ. ರಾಷ್ಟ್ರಕೂಟರ ಕಾಲದಲ್ಲಿ ಪೀಠದ ಮೇಲೆ ದೇವರ ಬದಲಿ ವ್ಯಕ್ತಿಯನ್ನು ಕೂರಿಸುತ್ತಿರುವುದು ವಿಶೇಷವಾಗಿದೆ.

ಶಾಸನದ ಮಹತ್ವ: ಶಾಸನವು ತುಂಬಾ ತೃಟಿತವಾಗಿದ್ದು ಹಳೆಗನ್ನಡದಲ್ಲಿದೆ. ಸ್ವಸ್ತಿ ವರ್ಷ ಕಲಿ ಉಲ್ಲೇಖ ಮಾತ್ರ ಕಂಡುಬರುತ್ತದೆ. ಇದು ಬಹುಶಃ ಗೋವುಗಳನ್ನು ಕದಿಯಲು ಬಂದ ಕಳ್ಳರ ವಿರುದ್ಧ ಹೋರಾಡಿ ವೀರ ಮರಣ ಹೊಂದಿರುವುದರ ಮಾಹಿತಿಯನ್ನು ಒಳಗೊಂಡಿರಬಹುದು ಎನ್ನಬಹುದು.

ನಂದಿ ಪೀಠ ಶಾಸನ: ತಡಸಿ ಗ್ರಾಮದ ವೀರಭದ್ರ ದೇವಾಲಯದ ಮುಂದೇ ನಂದಿ ಪೀಠ ಶಾಸನ ಪತ್ತೆಯಾಗಿದ್ದು, ಇದು ಸಿಸ್ಟ್ ಶಿಲೆಯಿಂದ ಕೂಡಿದ್ದು, 58 ಸೆಂ.ಮೀ. ಅಗಲವಾಗಿದೆ. ಪೀಠದ ಬಲಭಾಗದಲ್ಲಿ ಎರಡು ಸಾಲಿನ ಹಳೆಗನ್ನಡದ ಶಾಸನವಿದ್ದು, ಲಿಪಿಯ ಆಧಾರದ ಮೇಲೆ ಇದು ಕ್ರಿ.ಶ.13ನೇ ಶತಮಾನದ ಹೊಯ್ಸಳರ ಕಾಲದ್ದು ಎನ್ನಬಹುದಾಗಿದೆ.

ಮುಳಗಿರೆಯನು ಜಯಸಂವತ್ಸರದ ಆಶ್ವಿಜ ಸೋಮವಾರದಂದು ಈ ನಂದಿಯ ವಿಗ್ರಹವನ್ನು ಮಾಡಿಸಿ ಪ್ರತಿಷ್ಠಾಪಿಸಿದ್ದಾನೆ ಎಂದು ತಿಳಿದುಬರುತ್ತದೆ. ಈ ಶಾಸನವನ್ನು ಗುರುತಿಸುವಲ್ಲಿ ಪ್ರಾಚ್ಯವಸ್ತು ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್, ಗ್ರಾಮಸ್ಥರಾದ ಮಹ್ಮದ್ ಜಲಾಲ್, ದೇವೇಂದ್ರಪ್ಪ, ಐತಾಳು ಚೆನ್ನಪ್ಪ, ಶಾಸನ ಓದಲು ಸಹಕರಿಸಿದ ಡಾ.ಜಗದೀಶ, ಕುಮಾರ್ ನವಲಗುಂದ ಇವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News