ಸಿಎಂ ಪದಚ್ಯುತಿಗೆ ಇಬ್ಬರು ಕೇಂದ್ರ ಸಚಿವರ ಷಡ್ಯಂತ್ರ: ಶಾಸಕ ಯತ್ನಾಳ್ ಗಂಭೀರ ಆರೋಪ

Update: 2019-10-09 17:18 GMT

ವಿಜಯಪುರ, ಅ.9: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪದಚ್ಯುತಿಗೆ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಇಬ್ಬರು ಕೇಂದ್ರ ಸಚಿವರು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ನನಗೆ ಹೊಸದಿಲ್ಲಿಯ ಮೂಲಗಳಿಂದ ತಿಳಿದು ಬಂದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿನ ನೆರೆ ಸಂತ್ರಸ್ತರ ಬಗ್ಗೆ ನಾನು ಧ್ವನಿ ಎತ್ತದೇ ಇದ್ದಿದ್ದರೆ 15 ದಿನಗಳಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿ ಮನೆಗೆ ಹೋಗಬೇಕಿತ್ತು ಎಂದರು.

ಯಡಿಯೂರಪ್ಪಅವರಿಗೆ 76 ವರ್ಷ ವಯಸ್ಸಾಗಿದೆ. ಹೀಗಾಗಿ ಅವರನ್ನು ಮನೆಗೆ ಕಳುಹಿಸಲು ಇಬ್ಬರು ಕೇಂದ್ರ ಸಚಿವರು ಷಡ್ಯಂತ್ರ ಮಾಡಿದ್ದಾರೆ.

ಯಡಿಯೂರಪ್ಪ ವಿರುದ್ದ ನಿರಂತರ ಮಸಲತ್ತು ನಡೆಸಲಾಗಿದೆ. ಹೈಕಮಾಂಡ್ ಮೇಲೆ ಒತ್ತಡ ಹೇರಿ ಯಡಿಯೂರಪ್ಪ ರಾಜೀನಾಮೆ ಪಡೆಯಲು ಇಬ್ಬರು ಷಡ್ಯಂತ್ರ ನಡೆಸಿದ್ದು, ಇವರ ನಡವಳಿಕೆಯಿಂದ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ ಎಂದು ಅವರು ದೂರಿದರು.

ರಾಜ್ಯದಲ್ಲಿ ಬಿಜೆಪಿ ಕಟ್ಟಿದ್ದು ಅನಂತಕುಮಾರ್ ಮತ್ತು ಯಡಿಯೂರಪ್ಪ. ಆದರೆ ಈಗ ಯಡಿಯೂರಪ್ಪ ಅವರನ್ನು ತುಳಿಯುವ ಕೆಲಸವಾಗುತ್ತಿದೆ. ಪ್ರವಾಹ ಸಂತ್ರಸ್ತರ ವಿಚಾರದಲ್ಲಿ ಮಾತನಾಡಿದ್ದಕ್ಕೆ ನನಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಆ ನೋಟಿಸ್‌ಗೆ ನಾನು ಉತ್ತರ ನೀಡುವುದಿಲ್ಲ ಎಂದು ಯತ್ನಾಳ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದೇನೆ. ಪ್ರಧಾನಿ ಬಳಿ ರಾಜ್ಯದ ಜನರ ಭಾವನೆ ಹಂಚಿಕೊಳ್ಳಲು ನನಗೆ ಯಾವ ಹೆದರಿಕೆಯೂ ಇಲ್ಲ. ನಾನು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.

ನನ್ನನ್ನು ಪಕ್ಷದಿಂದ ಹೊರಗೆ ಕಳುಹಿಸಿದರೆ ನನಗೇನೂ ಹಾನಿಯಾಗುವುದಿಲ್ಲ. ನನ್ನ ಸಾಮರ್ಥ್ಯ ಏನು ಎಂಬುದನ್ನು ವಿಧಾನಪರಿಷತ್‌ನಲ್ಲಿ ತೋರಿಸಿದ್ದೇನೆ. ಪಕ್ಷೇತರನಾಗಿ ಗೆದ್ದಿದ್ದೇನೆ, ನಾನು ಪುನಃ ಬಿಜೆಪಿ ಸೇರುವಾಗ ಈ ಚಾಡಿಕೋರ ಸಚಿವರು ಬಂದು ಸ್ವಾಗತ ಕೋರಿರಲಿಲ್ಲ. ಅಮಿತ್ ಶಾ ಹಾಗೂ ಪ್ರಕಾಶ್ ಜಾವಡೇಕರ್ ನನ್ನ ಶಕ್ತಿಯನ್ನು ಅರ್ಥ ಮಾಡಿಕೊಂಡು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿಸಿಕೊಂಡಿದ್ದರು ಎಂದು ಯತ್ನಾಳ್ ಹೇಳಿದರು.

ನೆರೆ ಪರಿಹಾರದ ಕುರಿತು ಚರ್ಚಿಸಲು ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಮುಖ್ಯಮಂತ್ರಿಗೆ ಅವಕಾಶ ಸಿಗದೇ ಇರುವುದಕ್ಕೂ ಆ ಇಬ್ಬರು ಕೇಂದ್ರ ಸಚಿವರೇ ಕಾರಣ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪ್ರಧಾನಿಯನ್ನು ಭೇಟಿ ಮಾಡಲು ಅವಕಾಶ ಸಿಗುತ್ತದೆ. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಮಾತ್ರ ಅವಕಾಶ ಸಿಗುತ್ತಿಲ್ಲ ಅಂದರೇ ಏನು ಅರ್ಥ ಎಂದು ಯತ್ನಾಳ್ ಪ್ರಶ್ನಿಸಿದರು.

'ಸ್ಪೀಕರ್ ಜೊತೆ ಚರ್ಚೆ'
ವಿಧಾನಸಭೆ ಆವರಣದಲ್ಲಿ ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಾ ನಿಷೇಧ ಮಾಡಿ ಸ್ಪೀಕರ್ ಹೊರಡಿಸಿರುವ ಆದೇಶದ ಕುರಿತು, ಸ್ವತಃ ಅವರನ್ನು ನಾಳೆ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಯಾವ ಹಿನ್ನೆಲೆಯ್ಲಲಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಗೊತ್ತಿಲ್ಲ. ಸದನದಲ್ಲಿ ನಾವು ಏನು ಚರ್ಚೆ ಮಾಡುತ್ತೇವೆ ಎಂಬುದು ಸಾರ್ವಜನಿಕರಿಗೆ ಗೊತ್ತಾಗಬೇಕು. ನಾವು ಸದನದಲ್ಲಿ ಶಿಸ್ತಿನಿಂದ ವರ್ತಿಸುತ್ತೇವೆಯೋ ಅಥವಾ ಜಾತ್ರೆ, ಸಂತೆಯಲ್ಲಿ ಇರುವಂತೆ ವರ್ತಿಸುತ್ತೇವೆಯೋ ಜನ ಸಾಮಾನ್ಯರಿಗೆ ತಿಳಿಯಬೇಕು.
-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News