ಉಪಚುನಾವಣೆಗೆ ತಲೆನೋವಾಗುವ ನಾಯಕರಿಗೆ ಬಿಜೆಪಿಯಿಂದ ಹೊಸ ಮದ್ದು!

Update: 2019-10-09 14:03 GMT

ಬೆಂಗಳೂರು, ಅ.9: ಉಪಚುನಾವಣೆಯಲ್ಲಿ ಅನರ್ಹರ ಸ್ಪರ್ಧೆಗೆ ಅಡ್ಡಿಯಾಗಿದ್ದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಜೊತೆಗೆ ರಾಜ್ಯ ಸಚಿವ ಸ್ಥಾನಮಾನ ನೀಡಲು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಯಾರಿಗೆ, ಯಾವ ಸ್ಥಾನ: ಹಿರೇಕೆರೂರು ತಾಲೂಕಿನ ಮಾಜಿ ಶಾಸಕ ಯು.ಬಿ.ಬಣಕಾರ- ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮದ ಅಧ್ಯಕ್ಷ, ಕಾಗವಾಡ ತಾಲೂಕಿನ ಮಾಜಿ ಶಾಸಕ ಭರಮಗೌಡ- ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನೆಯ ಅಧ್ಯಕ್ಷ, ಗೋಕಾಕ ತಾಲೂಕಿನ ಅಶೋಕ ನಿಂಗಯ್ಯಸ್ವಾಮಿ- ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಮಸ್ಕಿ ತಾಲೂಕಿನ ಬಸನಗೌಡ ತುರವಿಹಾಳ ಅವರಿಗೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ, ಮುಂಡಗೋಡ ತಾಲೂಕಿನ ವಿ.ಎಸ್.ಪಾಟೀಲ್‌ಗೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ, ಹೊಸಪೇಟೆ ತಾಲೂಕಿನ ಎಚ್.ಆರ್.ಗವಿಯಪ್ಪಗೆ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನ, ಹೊಸಕೋಟೆಯ ಶರತ್ ಬಚ್ಚೇಗೌಡ ಅವರನ್ನು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಅದೇ ರೀತಿ, ಕೆ.ಆರ್.ಪುರಂ ಕ್ಷೇತ್ರದ ಮಾಜಿ ಶಾಸಕ ನಂದೀಶ ರೆಡ್ಡಿಗೆ ಬಿಎಂಟಿಸಿ ಸಂಸ್ಥೆಯ ಉಪಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇತ್ತೀಚಿಗಷ್ಟೇ, ಈ ನಾಯಕರು ಉಪಚುನಾವಣೆಯಲ್ಲಿ ತಮ್ಮ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಪರಾಜಿತ ಅಭ್ಯರ್ಥಿಗಳಿಗೆ ಅಥವಾ ಸ್ಥಳೀಯರಿಗೆ ನೀಡಬೇಕೆಂದು ಬೇಡಿಕೆಯಿಟ್ಟಿದ್ದರು.

ಅನರ್ಹ ಶಾಸಕರ ಬೇಡಿಕೆಗೆ ಮಣೆ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡುವುದರಿಂದ ಎದುರಾಗಬಹುದಾದ ಬಂಡಾಯವನ್ನು ಶಮನ ಮಾಡಲು, ಟಿಕೆಟ್ ಆಕಾಂಕ್ಷಿಗಳಿಗೆ ನಿಗಮ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

‘ನನಗೆ ಹುದ್ದೆ ಬೇಡ, ಟಿಕೆಟ್ ನೀಡಿ’
ನಾನು ಗೃಹ ಮಂಡಳಿ ಅಧ್ಯಕ್ಷ ಹುದ್ದೆ ಒಪ್ಪಿಕೊಳ್ಳಲ್ಲ. ಅಧಿಕಾರ ಸ್ವೀಕರಿಸುವುದಿಲ್ಲ. ಉಪಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷವು ಟಿಕೆಟ್ ನೀಡದೇ ಇದ್ದರೆ, ನನ್ನದೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಶರತ್ ಬಚ್ಚೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News