ಬಿಜೆಪಿ ಕಚೇರಿಗೆ ಸಂಸದೆ ಸುಮಲತಾ ಭೇಟಿ: ಕಾಂಗ್ರೆಸ್ ಅಸಮಾಧಾನ

Update: 2019-10-09 13:48 GMT

ಮಂಡ್ಯ, ಅ.9: ತಾನು ಯಾವುದೇ ಪಕ್ಷದ ಅಭ್ಯರ್ಥಿಯಲ್ಲವೆಂದು ಹೇಳಿಕೊಂಡು ಭಾರಿ ಮತಗಳಿಂದ ಜಯಗಳಿಸಿದ ಸಂಸದೆ ಸುಮಲತಾ ಅಂಬರೀಷ್, ಬುಧವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾಂಗ್ರೆಸ್ ಮತ್ತು ಅಭಿಮಾನಿಗಳ ಅಸಮಾಧಾನಕ್ಕೆ ಗುರಿಯಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್ ಪಕ್ಷ ಸಪೋರ್ಟ್ ಮಾಡಿಲ್ಲ, ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಅವರಿಗೆ ಈಗಾಗಲೇ ಹಲವಾರು ವೇದಿಕೆಗಳಲ್ಲಿ ಕೃತಜ್ಞತೆ ಹೇಳಿದ್ದೇನೆ ಎಂಬ ಸುಮಲತಾ ಹೇಳಿಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತಷ್ಟು ಕೆರಳಿಸಿದೆ.

ನಗರದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿ ವಿಕಾಸ ಭವನಕ್ಕೆ ಭೇಟಿ ನೀಡಿದ ಸುಮಲತಾ ಅವರಿಗೆ ಬಿಜೆಪಿ ಮುಖಂಡರಿಂದ ಸ್ವಾಗತ ದೊರೆಯಿತು. ಕಚೇರಿಯಲ್ಲಿದ್ದ ಬಿಜೆಪಿ, ಸಂಘಪರಿವಾರ ಸಂಸ್ಥಾಪಕರ ಫೋಟೋಗಳಿಗೆ ನಮನ ಸಲ್ಲಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಬಿಜೆಪಿಯವರು ಸಾಕಷ್ಟು ಕೆಲಸ ಮಾಡಿದರು. ಕೃತಜ್ಞತೆ ಹೇಳಬೇಕಾದುದು ನನ್ನ ಜವಾಬ್ಧಾರಿ. ಆ ಕಾರಣದಿಂದ ಅವರಿಗೆ ಕೃತಜ್ಞತೆ ಹೇಳಲು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದೇನೆ ಎಂದು ಸುಮಲತಾ ತಮ್ಮ ನಡೆಗೆ ಸ್ಪಷ್ಟನೆ ನೀಡಿದರು.

ನಾನು ಯಾವುದೇ ಪಕ್ಷ ಸೇರುವ ಮೊದಲು ಮಾಧ್ಯಮದವರಿಗೆ ನಿರ್ಧಾರ ಪ್ರಟಿಸಿಯೇ ಸೇರಿಕೊಳ್ಳುತ್ತೇನೆ. ಅದರಲ್ಲಿ ಮುಚ್ಚುಮರೆ ಏನು ಇರುವುದಿಲ್ಲ. ಈವರೆಗೂ ಯಾವ ಪಕ್ಷದವರೂ ನನ್ನನ್ನ ಆಹ್ವಾನಿಸಿಲ್ಲ. ಬಿಜೆಪಿಗೆ ಸಾಕಷ್ಟು ಬಹುಮತವಿದೆ. ನನ್ನ ಅಗತ್ಯ ಅವರಿಗೆ ಇದೆಯಾ ಯೋಚನೆ ಮಾಡಿ ಎಂದು ಅವರು ಹೇಳಿದರು.

ಹಲಗೂರು ಬಿಜೆಪಿ ಕಚೇರಿಗೂ ಹೋಗಿದ್ದೆ. ಹಾಗಂತ ನಾನು ಬಿಜೆಪಿಗೆ ಸೇರುತ್ತೇನೆ ಎಂಬು ಭಾವಿಸಬೇಕಿಲ್ಲ. ಜನತೆಗೆ ತಪ್ಪು ಸಂದೇಶ ಹೋಗುವುದು ಬೇಡ. ನಾನು ಬೇರೆ ರೀತಿಯ ರಾಜಕಾರಣಿ. ಹೇಳೋದೊಂದು, ಮಾಡೋದೊಂದು ರೀತಿಯಲ್ಲ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಬಿಜೆಪಿಯ ಸಹಕಾರವೂ ಬೇಕಾಗಿದೆ ಎಂದು ಅವರು ತಿಳಿಸಿದರು. 

ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು:
ಹೊರ ದೇಶದಲ್ಲಿ ಯಾರಿದ್ದರು? ಹೇಗಿದ್ದರು? ಎಂಬುದು ಫೋಟೋಸ್ ರಿಲೀಸ್ ಆಗಿವೆ. ಜನರಿಗೆ ಯಾರು ಏನು ಎಂಬುದು ಗೊತ್ತಾಗಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕೆಗೆ ಸುಮಲತಾ ತಿರುಗೇಟು ನೀಡಿದರು.

ಕಬ್ಬು ಬೆಳೆಗಾರರ ಸಮಸ್ಯೆ ನಿನ್ನೆ, ಮೊನ್ನೆಯದಲ್ಲ. ಈ ಹಿಂದೆ ಅಧಿಕಾರದಲ್ಲಿದ್ದವರ ನಿರ್ಲಕ್ಷ್ಯದಿಂದ ಕಬ್ಬು ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ಮೂರು ತಿಂಗಳಿಂದಷ್ಟೆ ಗೆದ್ದವರು ಏನು ಮಾಡಿಲ್ಲ ಅಂದರೆ ಹೇಗೆ? ಈಗಿನ ಸಿಎಂ ಸಂಸದರ ಸಭೆ ಕರೆದಾಗ ಮೊದಲು ಧ್ವನಿ ಎತ್ತಿದ್ದು ನಾನು ಎಂದು ಅವರು ತಿಳಿಸಿದರು.

ಜೋಡೆತ್ತುಗಳು ಎಲ್ಲಿ ಹೋದವು ಎಂಬ ಮಾಜಿ ಸಂಸದ ಶಿವರಾಮೇಗೌಡ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿರುವ ಶಾಸಕರನ್ನು ಒತ್ತಾಯಿಸುವ ಬದಲು ಜೋಡೆತ್ತುಗಳ ಮೇಲೆ ಏಕೆ ಟೀಕೆ? ನಾನು ಒಬ್ಬಳು ಗೆದ್ದ ಮೇಲೆ ಅವರ 8 ಶಾಸಕರ ಜವಾಬ್ದಾರಿ ಮುಗಿದು ಹೋಯಿತೆ ಎಂದರು.

ಮಾಜಿ ಶಾಸಕ ಎಚ್.ಹೊನ್ನಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಡಾ.ಸಿದ್ದರಾಮಯ್ಯ, ಮಲ್ಲಿಕಾರ್ಜುನ್, ಎಚ್.ಆರ್.ಅರವಿಂದ್, ಇತರೆ ಬಿಜೆಪಿ ಮುಖಂಡರು ಹಾಗು ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News