ಅತಿವೃಷ್ಟಿ ಬಗ್ಗೆ ಚರ್ಚಿಸಲು 10 ದಿನಗಳ ಅಧಿವೇಶನ ಕರೆಯಿರಿ: ರಾಜ್ಯ ಸರಕಾರಕ್ಕೆ ಭೋಜೇಗೌಡ ಆಗ್ರಹ

Update: 2019-10-09 18:25 GMT

ಚಿಕ್ಕಮಗಳೂರು, ಅ.9: ರಾಜ್ಯದ ಬಹುತೇಕ ಜಿಲ್ಲೆಗಳು ಅತಿವೃಷ್ಟಿಯಿಂದ ನಲುಗಿದ್ದು, ರಾಜ್ಯ ಸರಕಾರ ಇನ್ನೂ ಪರಿಹಾರಧನ ಬಿಡುಗಡೆ ಮಾಡದೇ ನಿರ್ಲಕ್ಷ್ಯವಹಿಸಿದೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚಿಸಲು ಮೂರು ದಿನಗಳು ಸಾಲುವುದಿಲ್ಲ. ಇದಕ್ಕಾಗಿ ಕನಿಷ್ಠ 10 ದಿನಗಳ ಅಧಿವೇಶನವನ್ನಾದರೂ ನಡೆಸಬೇಕೆಂದು ಜೆಡಿಎಸ್ ರಾಜ್ಯ ವಕ್ತಾರ ಹಾಗೂ ವಿಧಾನಪರಿಷತ್ ಶಾಸಕ ಎಸ್.ಎಲ್.ಭೋಜೇಗೌಡ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿ ಪರಿಹಾರ ಕೈಗೊಳ್ಳುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಆಡಳಿತ ಪಕ್ಷದವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೇವಲ 24 ಗಂಟೆಗಳಲ್ಲಿ ಈ ಕುರಿತು ಚರ್ಚಿಸಲು ಸಾಧ್ಯವೆ ಇಲ್ಲ. ರಾಜ್ಯ ಸರಕಾರ ಕೇವಲ ಕಣ್ಣೊರೆಸುವ ತಂತ್ರಗಾರಿಕೆಯಿಂದ ಅಧಿವೇಶನ ನಡೆಸಬಾರದು. ಅವರಿಗೆ ರೈತರು, ಜನಸಾಮಾನ್ಯರ ಬಗ್ಗೆ ಸಹಾನುಭೂತಿ, ಕಾಳಜಿ ಇದ್ದರೆ ಕನಿಷ್ಠ 10 ದಿನಗಳ ಅಧಿವೇಶನ ನಡೆಸಬೇಕು. ಅಧಿವೇಶನದಲ್ಲಿ ಅತಿವೃಷ್ಟಿ ಬಿಟ್ಟು ಬೇರಾವುದೇ ವಿಚಾರದ ಬಗ್ಗೆಯೂ ಚರ್ಚೆ ನಡೆಯಬಾರದು ಎಂದರು.

ರಾಜ್ಯ ಸರಕಾರಕ್ಕೆ ಜನರ ಸಮಸ್ಯೆ ಬಗೆಹರಿಸುವ ಬಗ್ಗೆ ಕಾಳಜಿ ಇಲ್ಲ. ಅತಿವೃಷ್ಟಿ ಚರ್ಚೆ ನಡೆದರೆ ಸರಕಾರಕ್ಕೆ ಭಾರೀ ಮುಖಭಂಗವಾಗುತ್ತದೆ. ಈ ಕಾರಣಕ್ಕೆ ಅತಿವೃಷ್ಟಿ ಚರ್ಚೆ ನಡೆಯಬಾರದು ಎಂಬ ಕಾರಣದಿಂದಲೇ 3 ದಿನಗಳ ಅಧಿವೇಶನವನ್ನು ಕರೆದಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಅಂತಹ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸದೆ ಅಲ್ಲಿಂದ ಕಾಲ್ಕಿತ್ತಿದ್ದಾದರೂ ಏಕೆ? ಎಂದು ಪ್ರಶ್ನಿಸಿದ ಬೋಜೇಗೌಡ, ಅತಿವೃಷ್ಟಿ ಪರಿಹಾರಕ್ಕೆ ಈಗ ಕೇಂದ್ರ ಸರಕಾರ 1,200 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಅದು ಈವರೆಗೂ ಯಾವುದೇ ಫಲಾನುಭವಿಗೂ ತಲುಪಿಲ್ಲ. ಈ ಕುರಿತು ಚರ್ಚಿಸಲು ಸಮಯ ಬೇಕು. ಚರ್ಚೆ ಮಾಡಲು ಅವಕಾಶವೇ ಇಲ್ಲವೆಂದಾದ ಮೇಲೆ ಅಧಿವೇಶನದಲ್ಲಿ ಭಾಗವಹಿಸಿಯಾದರೂ ಏನು ಪ್ರಯೋಜನ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಬಿಜೆಪಿಯವರು ಇವರು ಏನೂ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದರು. ರೈತರ ಸಾಲ ಮನ್ನಾ ಮಾಡಿದ್ದು, ಋಣಮುಕ್ತ ಕಾಯಿದೆ ಜಾರಿಗೆ ತಂದಿದ್ದು ಸಾಧನೆಯಲ್ಲವೆ?, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೊಡಗಿನಲ್ಲಿ ಅತಿವೃಷ್ಟಿ ಉಂಟಾಗಿತ್ತು. ಈಗ ಅಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಗೃಹಪ್ರವೇಶಕ್ಕೆ ಸಿದ್ಧವಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೆ ಅವರೇ ಗೃಹಪ್ರವೇಶ ಮಾಡಬಹುದಾಗಿದೆ ಎಂದು ವ್ಯಂಗ್ಯವಾಡಿದರು. 

ಅತಿವೃಷ್ಟಿಯಿಂದ ತೊಂದರೆಗೆ ಸಿಲುಕಿದವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕನಿಷ್ಠ ಆತ್ಮಹತ್ಯೆಗೆ ಶರಣಾದವರ ಮನೆಗೆ ತೆರಳಿ ಅವರಿಗೆ ಸಾಂತ್ವಾನ ಹೇಳುವ ಕೆಲಸವನ್ನೂ ಆಡಳಿತ ಪಕ್ಷದವರು ಮಾಡಿಲ್ಲ. ಇವರಿಗೆ ನಿಜವಾಗಿಯೂ ಜನರ ಸಮಸ್ಯೆ ಪರಿಹರಿಸಬೇಕೆಂಬ ಕಾಳಜಿ ಇದ್ದಿದ್ದರೆ ಕನಿಷ್ಠ 10 ದಿನಗಳ ಅಧಿವೇಶನ ಕರೆಯುತ್ತಿದ್ದರು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News