ತುರ್ತುಪರಿಸ್ಥಿತಿಗಿಂತ ಗಂಭೀರ ಸ್ಥಿತಿ

Update: 2019-10-10 06:28 GMT

ಹುಲಿ ಅಪಾಯಕಾರಿ ಪ್ರಾಣಿ ಹೌದು. ಆದರೆ ಅದು ಗೋವಿನ ವೇಷದಲ್ಲಿ ನಮ್ಮ ನಡುವೆ ಬದುಕುತ್ತಿದ್ದರೆ ಇನ್ನಷ್ಟು ಅಪಾಯಕಾರಿ. ಹುಲಿಯೆಂದು ಗೊತ್ತಿದ್ದರೆ ಅದನ್ನು ಎದುರಿಸಲು ಕನಿಷ್ಠ ಪ್ರಯತ್ನವನ್ನಾದರೂ ಮಾಡಬಹುದು ಅಥವಾ ಅದರಿಂದ ದೂರ ಉಳಿದು ಪ್ರಾಣವನ್ನು ರಕ್ಷಿಸಿಕೊಳ್ಳಲು ನೋಡಬಹುದು. ವೇಷ ಮರೆಸಿದ ಹುಲಿಯನ್ನು ಹಲವರು ಗೋವೆಂದು ತಿಳಿದು ಸ್ನೇಹ ಬೆಳೆಸಲು ಯತ್ನಿಸಿ ಬಲಿಯಾಗುವ ಸಾಧ್ಯತೆಗಳಿವೆ. ಸರ್ವಾಧಿಕಾರ ಅಥವಾ ತುರ್ತು ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಈ ದೇಶದಲ್ಲಿ ಬ್ರಿಟಿಷರು ಬರುವ ಮೊದಲೂ ಗುಲಾಮ ಪದ್ಧತಿಯಿತ್ತು. ಆದರೆ ಅದು ಧರ್ಮ ಮತ್ತು ಸಂಸ್ಕೃತಿಯ ಮರೆಯಲ್ಲಿತ್ತು. ದಲಿತರು, ಶೂದ್ರರನ್ನು ಆ ಮೂಲಕವೇ ವೈದಿಕರು ತಮ್ಮ ನಿಯಂತ್ರಣದಲ್ಲಿಟ್ಟಿದ್ದರು. ಆದರೆ ಅದರ ವಿರುದ್ಧ ಪ್ರತಿಭಟಿಸಬೇಕು ಎಂದು ಈ ನೆಲದ ಜನರಿಗೆ ಯಾವತ್ತೂ ಅನ್ನಿಸಿರಲಿಲ್ಲ. ಯಾಕೆಂದರೆ ಅವರೆಲ್ಲರೂ ಬೇರೆ ಬೇರೆ ಮುಖವಾಡದಲ್ಲಿದ್ದರು. ಅದೇ ಸಂದರ್ಭದಲ್ಲಿ ಈ ದೇಶಕ್ಕೆ ಆಗಮಿಸಿದ ಬ್ರಿಟಿಷರ ಸರ್ವಾಧಿಕಾರವನ್ನು ಒಕ್ಕೊರಲಿನಲ್ಲಿ ಪ್ರತಿಭಟಿಸಲು ಮುಂದಾದರು. ಯಾಕೆಂದರೆ ಈ ಸರ್ವಾಧಿಕಾರಕ್ಕೆ ಯಾವುದೇ ಮುಖವಾಡಗಳಿರಲಿಲ್ಲ. ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್ ಈ ಮುಖವಾಡ ರಹಿತವಾದ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದ್ದರೆ, ಇತ್ತ ಅಂಬೇಡ್ಕರ್ ನಮ್ಮವರೆಂಬ ಮುಖವಾಡದ ಮರೆಯಲ್ಲಿರುವ ಅಪಾಯಕಾರಿ ಹುಲಿಯ ವಿರುದ್ಧವೂ ಹೋರಾಡಬೇಕಾದ ಅಗತ್ಯವನ್ನು ಮನಗಂಡರು. ಮುಖವಾಡವಿಲ್ಲದ ಸರ್ವಾಧಿಕಾರಕ್ಕಿಂತ ಅಪಾಯಕಾರಿ, ಮುಖವಾಡಹೊಂದಿದ ವೈದಿಕ ಸರ್ವಾಧಿಕಾರ ಎನ್ನುವುದರ ಅರಿವು ಅವರಿಗಿತ್ತು. ಸರ್ವಾಧಿಕಾರ ಅಥವಾ ತುರ್ತುಪರಿಸ್ಥಿತಿ ಎಂದರೆ ಪ್ರಜೆಗಳಿಗೆ ಪ್ರಶ್ನಿಸುವ, ಪ್ರತಿರೋಧಿಸುವ ಹಕ್ಕುಗಳನ್ನು ನಿರಾಕರಿಸುವುದು. ಬ್ರಿಟಿಷರ ಕಾಲದಲ್ಲಿ ಅದರ ಆಡಳಿತದ ಲೋಪದೋಷಗಳ ಕಡೆಗೆ ಬೆಟ್ಟು ಮಾಡಿದವರನ್ನೆಲ್ಲ ರಾಜದ್ರೋಹದ ಹೆಸರಿನಲ್ಲಿ ಜೈಲಿಗೆ ತಳ್ಳಲಾಗುತ್ತಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಇಂದಿರಾಗಾಂಧಿ ಆಡಳಿತದ ವಿರುದ್ಧ ಸಣ್ಣ ಪದ್ಯ ಬರೆದವರನ್ನೂ ಜೈಲಿಗಟ್ಟಲಾಗುತ್ತಿತ್ತು. ಪ್ರಜಾಸತ್ತೆಯಲ್ಲಿ ಪ್ರಶ್ನಿಸುವುದು ಪ್ರಜೆಗಳ ಹಕ್ಕು. ಈ ಕಾರಣಕ್ಕಾಗಿಯೇ ಇಲ್ಲಿ ಪ್ರಜೆಗಳನ್ನೇ ಪ್ರಭುಗಳು ಎಂದು ಕರೆಯಲಾಗುತ್ತದೆ. ಆಡಳಿತ ಪಕ್ಷವನ್ನು ಪ್ರಶ್ನಿಸುವುದಕ್ಕಾಗಿಯೇ ಇಲ್ಲಿ ವಿರೋಧಪಕ್ಷಗಳಿವೆ. ಜೊತೆಗೆ, ಸರಕಾರಕ್ಕೆ ಮಾರ್ಗದರ್ಶನ ಮಾಡಲು ಈ ನಾಡಿನ ಶಿಕ್ಷಣ, ಸಾಹಿತ್ಯ, ವಿಜ್ಞಾನ, ಮಾಧ್ಯಮ ಮೊದಲಾದ ಕ್ಷೇತ್ರಗಳಿಂದ ಗಣ್ಯರನ್ನು ಆಯ್ಕೆ ಮಾಡಿ ರಾಜ್ಯಸಭೆಗೆ ಕಳುಹಿಸಲಾಗುತ್ತದೆ. ಆರೋಪ, ಟೀಕೆ, ಖಂಡನೆಗಳನ್ನು ಸ್ವೀಕರಿಸಿ , ತನ್ನನ್ನು ತಾನು ತಿದ್ದಿ ದೇಶವನ್ನು ಮುನ್ನಡೆಸುವುದು ಸರಕಾರದ ಕರ್ತವ್ಯ. ಅವರು ಟೀಕಿಸುತ್ತಿರುವುದು ದೇಶವನ್ನಲ್ಲ, ಸರಕಾರದ ಆಡಳಿತ ವೈಖರಿಯನ್ನು ಎನ್ನುವ ಪ್ರಜ್ಞೆ ಆಡಳಿತ ನಡೆಸುವ ನಾಯಕರಿಗೆ ಇರಬೇಕಾಗುತ್ತದೆ. ಆದರೆ ಇಂದು ಸರಕಾರವನ್ನು ಟೀಕಿಸುವುದೆಂದರೆ ದೇಶವನ್ನು ಟೀಕಿಸುವುದು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ತುರ್ತುಪರಿಸ್ಥಿತಿ ಅಧಿಕೃತವಾಗಿ ಘೋಷಣೆಯಾಗದೇ ಇದ್ದರೂ, ತುರ್ತು ಪರಿಸ್ಥ್ಝಿತಿಯ ಕಾಲದಲ್ಲಿ ಏನೆಲ್ಲ ಸಂಭವಿಸಿದೆಯೋ ಅವೆಲ್ಲವೂ ಒಂದೊಂದಾಗಿ ಸಂಭವಿಸುತ್ತಿದೆೆ. ಪ್ರಜಾಸತ್ತೆಯ ಮುಖವಾಡ ಧರಿಸಿ, ತುರ್ತುಪರಿಸ್ಥಿತಿ ಜನರ ಮೇಲೆ ದಾಳಿ ನಡೆಸುತ್ತಿದೆ. ಬಹುಶಃ ಅಧಿಕೃತ ತುರ್ತುಪರಿಸ್ಥಿತಿಗಿಂತಲೂ ಅಪಾಯಕಾರಿಯಾದ ಸ್ಥಿತಿ ಇದು. ಪ್ರಜೆಗಳೇ ತನ್ನನ್ನು ಅಭೂತಪೂರ್ವ ಬಹುಮತದಿಂದ ಆರಿಸಿದ ಕಾರಣದಿಂದಾಗಿ ತನ್ನ ಯಾವುದೇ ನಿರ್ಧಾರಗಳನ್ನು ಅಥವಾ ಆಡಳಿತ ವೈಫಲ್ಯಗಳನ್ನು ಯಾರೂ ಪ್ರಶ್ನಿಸಬಾರದು ಎಂದು ಸರಕಾರ ಹೇಳುತ್ತಿದೆ. ಪ್ರಶ್ನಿಸಿದವರನ್ನು ದೇಶದ್ರೋಹಿಗಳು ಎಂದು ಕರೆಯುತ್ತಿದೆ. ಈ ತುರ್ತುಪರಿಸ್ಥಿತಿಯ ಮರೆಯಲ್ಲಿಯೇ ಅಂಬೇಡ್ಕರ್ ವಿರೋಧಿಸಿದ ಮನುವಾದಿ ಸರ್ವಾಧಿಕಾರ ಕೂಡ ‘ಹಿಂದುತ್ವ’ದ ವೇಷದಲ್ಲಿ ತಲೆಯೆತ್ತಿದೆ. ಈ ಎರಡರ ಮುಂದೆಯೂ ದೇಶ ಅಸಹಾಯಕವಾಗಿದೆ.

 ಈ ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆಯನ್ನು ವಿರೋಧಿಸಿ ಮಣಿರತ್ನಂ, ಅಪರ್ಣಾ ಸೇನ್, ರಾಮಚಂದ್ರ ಗುಹಾ, ಅನುರಾಗ್ ಕಶ್ಯಪ್, ಶ್ಯಾಮ್ ಬೆನಗಲ್, ಶುಭಾ ಮುದ್ಗಲ್ ಸೇರಿದಂತೆ ಸುಮಾರು 49 ಶ್ರೇಷ್ಠ ಸಾಧಕರು ಪ್ರಧಾನಿ ಮೋದಿಯವರಿಗೆ ಪತ್ರವೊಂದನ್ನು ಬರೆದರು. ಅವರ ಕಳಕಳಿಗೆ ಪ್ರಧಾನಿ ತಕ್ಷಣ ಸ್ಪಂದಿಸಬೇಕಾಗಿತ್ತು. ಯಾಕೆಂದರೆ ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ವಿಶ್ವಾದ್ಯಂತ ಚರ್ಚೆಗೊಳಗಾಗುತ್ತಿದೆ. ದುರದೃಷ್ಟಕ್ಕೆ ಇದನ್ನು ವಿರೋಧಿಸಿದ ಚಿಂತಕರ ವಿರುದ್ಧವೇ ದೇಶದ್ರೋಹದ ಪ್ರಕರಣ ದಾಖಲಾಗಿದೆ. ತುರ್ತುಪರಿಸ್ಥಿತಿಯಲ್ಲೂ ಇಂತಹದೊಂದು ಸ್ಥಿತಿ ನಿರ್ಮಾಣವಾದ ಉದಾಹರಣೆಗಳಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಗುಂಪುಹತ್ಯೆಗಳು ಕಾನೂನು ವ್ಯವಸ್ಥೆಯ ಸ್ಪಷ್ಟ ವೈಫಲ್ಯವಾಗಿದೆ. ಸ್ವತಃ ಸರಕಾರವೇ ಇದರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸನ್ನಿವೇಶ ಇಂದು ದೇಶದಲ್ಲಿ ನಿರ್ಮಾಣವಾಗಿದೆ. ಆದರೆ ಸರಕಾರ ಗುಂಪು ಹತ್ಯೆಯನ್ನು ನಿಯಂತ್ರಿಸುವ ಬದಲು, ಅದನ್ನು ಖಂಡಿಸಿದವರನ್ನು ನಿಯಂತ್ರಿಸಲು ಹೊರಟಿದೆ. ಬೇರೆ ಬೇರೆ ಸಾಧನೆಗಳ ಮೂಲಕ ದೇಶಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟ ಗಣ್ಯರ ವಿರುದ್ಧ ‘ದೇಶದ್ರೋಹಿ’ ಪ್ರಕರಣ ದಾಖಲಿಸಲು ಅವಕಾಶ ನೀಡಿದ ಸರಕಾರ, ಗುಂಪು ಹತ್ಯೆಗಳಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಪರೋಕ್ಷವಾಗಿ ‘ದೇಶಪ್ರೇಮಿ’ಗಳು ಎಂದು ಬಿಂಬಿಸಿದಂತಾಗಿದೆ. ಒಂದೆಡೆ ಈ ದೇಶದ ಚಿಂತಕರು, ಸಾಹಿತಿಗಳು, ಕಲಾವಿದರನ್ನು ಜೈಲಿಗೆ ತಳ್ಳುವ ಸಂಚು ನಡೆಸುತ್ತಾ, ದೇಶವನ್ನು ಗುಂಪು ಹತ್ಯೆಗಳಲ್ಲಿ ಭಾಗಿಯಾಗುವ ಗೂಂಡಾಗಳ ನೆಲೆಯಾಗಿ ಪರಿವರ್ತಿಸಲು ಸರಕಾರ ಸಂಚು ನಡೆಸುತ್ತಿದೆಯೇ ಎಂದು ಜನರು ಅನುಮಾನ ಪಡುವಂತಾಗಿದೆ. ಗುಂಪು ಹತ್ಯೆಗಳಲ್ಲಿ ಭಾಗಿಯಾದವರ ವಿರುದ್ಧ ಎಂದೂ ಸ್ವಯಂ ಆಸಕ್ತಿಯಿಂದ ಪ್ರಕರಣಗಳನ್ನು ದಾಖಲಿಸಿಕೊಳ್ಳದ ಪೊಲೀಸರು, ಅವುಗಳನ್ನು ಖಂಡಿಸಿದ ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ತೋರಿಸಿದ ಅತ್ಯಾಸಕ್ತಿಯೇ ಈ ದೇಶ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಗುಂಪುಹತ್ಯೆಯಲ್ಲಿ ಭಾಗಿಯಾಗುತ್ತಿರುವ ದುಷ್ಕರ್ಮಿಗಳು ‘ಜೈ ಶ್ರೀರಾಮ್’ ಘೋಷಣೆಗಳನ್ನೂ ದುರುಪಯೋಗಗೊಳಿಸುತ್ತಿದ್ದಾರೆ. ಒಂದೆಡೆ ಪ್ರಜಾಸತ್ತೆಯ ವೇಷದಲ್ಲಿ ತುರ್ತುಪರಿಸ್ಥಿತಿ ನಮ್ಮನ್ನು ಆಳುತ್ತಿದ್ದರೆ, ಧರ್ಮ-ಸಂಸ್ಕೃತಿಯ ಮುಖವಾಡದಲ್ಲಿ ಗೂಂಡಾಗಳನ್ನು ಬಳಸಿಕೊಂಡು ಮನುವಾದಿ ಶಕ್ತಿ ವಿಜೃಂಭಿಸುತ್ತಿದೆ. ಈ ಮಾರುವೇಷವನ್ನು ಸ್ಪಷ್ಟವಾಗಿ ಗುರುತಿಸಿ ನಾವು ಅವುಗಳ ವಿರುದ್ಧ ಹೋರಾಟವನ್ನು ಸಂಘಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಪ್ರಬುದ್ಧತೆ-ದೂರದೃಷ್ಟಿ, ಗಾಂಧೀಜಿಯ ಸಹನೆ-ವಿವೇಕ ಎರಡನ್ನೂ ನಮ್ಮದಾಗಿಸಿಕೊಂಡು ಮುಂದಡಿಯಿಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News