ಈ ರಾಜ್ಯದಲ್ಲಿ ಮದುವೆಯಾಗಬೇಕಾದರೆ ವರನಿಗೆ 'ಶೌಚಾಲಯ ಸೆಲ್ಫಿ' ಕಡ್ಡಾಯ !

Update: 2019-10-10 04:17 GMT
ಸಾಂದರ್ಭಿಕ ಚಿತ್ರ

ಭೋಪಾಲ್: ಬಹುಶಃ ವಿವಾಹಪೂರ್ವದಲ್ಲಿ ಈ ಬಗೆಯ ಫೋಟೊಶೂಟ್ ಯಾರೂ ಇಷ್ಟಪಡಲಾರರು. ಆದರೆ ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಮುಖ್ಯಮಂತ್ರಿ ಕನ್ಯಾ ವಿವಾಹ/ ನಿಖಾ ಯೋಜನೆಯಡಿ 51 ಸಾವಿರ ರೂಪಾಯಿ ನೆರವು ಪಡೆಯಬೇಕಾದರೆ ಇದು ಕಡ್ಡಾಯ!

ಭಾವಿ ಪತಿಯ ಮನೆಯಲ್ಲಿ ಶೌಚಾಲಯ ಇದೆ ಎಂದು ವಧು ಸಾಬೀತುಪಡಿಸಿದರಷ್ಟೇ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸರ್ಕಾರಿ ಅಧಿಕಾರಿಗಳು ಎಲ್ಲೆಲ್ಲಿ ಶೌಚಾಲಯಗಳಿವೆ ಎಂದು ತಪಾಸಣೆ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ವರ ಶೌಚಾಲಯದಲ್ಲಿ ನಿಂತಿರುವ ಸೆಲ್ಫಿ ನೀಡುವುದನ್ನು ಕಡ್ಡಾಯಪಡಿಸಿದ್ದಾರೆ.

ಶೌಚಾಲಯದಲ್ಲಿ ನಿಂತು ಫೋಟೊ ತೆಗೆಸಿಕೊಳ್ಳುವ ಈ ಮುಜುಗರ ಕೇವಲ ಗ್ರಾಮೀಣ ಪ್ರದೇಶಗಳಿಗಷ್ಟೇ ಸೀಮಿತವಲ್ಲ; ರಾಜ್ಯ ರಾಜಧಾನಿ ಭೋಪಾಲ್‍ನ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಾ ಇದೇ ಬೇಡಿಕೆ ಮುಂದಿಡುತ್ತಾರೆ.

"ವರ ಶೌಚಾಲಯದಲ್ಲಿ ನಿಂತ ಚಿತ್ರವನ್ನು ವಿವಾಹ ಪ್ರಮಾಣಪತ್ರಕ್ಕೆ ಲಗತ್ತಿಸಿ ನೀಡುವ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ. ನಾನು ಈ ಫೋಟೊ ನೀಡದೇ ಖಾಜಿಯವರು ನಿಖಾ ಓದುವುದಿಲ್ಲ ಎಂದು ನನಗೆ ಹೇಳಲಾಗಿತ್ತು" ಎಂದು ಭೋಪಾಲ್‍ನ ಕೇಂದ್ರೀಯ ಗ್ರಂಥಾಲಯದಲ್ಲಿ ನಡೆದ 74 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ವಿವಾಹವಾದ ಜಹಂಗಿರಾಬಾದ್ ನಿವಾಸಿ ಆಪಾದಿಸಿದರು.

"ವಿವಾಹಕ್ಕೆ ಮುನ್ನ ವರನ ಮನೆಯಲ್ಲಿ ಶೌಚಾಲಯ ಇದೆ ಎಂದು ಸಾಬೀತುಪಡಿಸಬೇಕು ಎನ್ನುವ ನಿಯಮ ತಪ್ಪಲ್ಲ. ಸಾಮಾಜಿಕ ನ್ಯಾಯ ಇಲಾಖೆ ಅಂಥ ನಿರ್ದೇಶನ ನೀಡಿದೆ. ಆದರೆ ಈ ಯೋಜನೆಯ ಅನುಷ್ಠಾನದಲ್ಲಿ ಸುಧಾರಣೆ ತರಬೇಕು" ಎನ್ನುವುದು ಸಾಮಾಜಿಕ ನ್ಯಾಯ ಇಲಾಖೆಯ ಪ್ರಧಾನ ಕಾರ್ಯದಶಿ ಜೆ.ಎನ್.ಕನ್ಸೋತಿಯಾ ಹೇಳುತ್ತಾರೆ. 2013ರಲ್ಲೇ ಶೌಚಾಲಯ ಕಡ್ಡಾಯಪಡಿಸಲಾಗಿತ್ತು. ಆದರೆ ಶೌಚಾಲಯದಲ್ಲಿ ವರ ನಿಂತಿರುವ ಫೋಟೊ ಕಡ್ಡಾಯಪಡಿಸಿರುವುದು ಇತ್ತೀಚೆಗೆ.

"ಹಿಂದೆ ನಿಯಾವಳಿಯಲ್ಲಿ ಒಂದಷ್ಟು ಸಡಿಲಿಕೆ ಇತ್ತು. ವಿವಾಹವಾದ 30 ದಿನಗಳ ಒಳಗಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಇತ್ತು" ಎಂದು ಯೋಜನೆ ಅನುಷ್ಠಾನದ ಉಸ್ತುವಾರಿ ಅಧಿಕಾರಿ ಸಿ.ಬಿ.ಮಿಶ್ರಾ ಹೇಳುತ್ತಾರೆ. ವರ ಶೌಚಾಲಯದಲ್ಲಿ ನಿಂತಿರುವ ಭಾವಚಿತ್ರ ಲಗತ್ತಿಸುವುದರಲ್ಲಿ ತಪ್ಪೇನಿದೆ? ಅದು ಆಮಂತ್ರಣ ಪತ್ರಿಕೆಯಲ್ಲಿ ಇರುವುದಿಲ್ಲ ಎನ್ನುವುದು ಅವರ ಸಮರ್ಥನೆ.

ಮುಖ್ಯಮಂತ್ರಿ ಕನ್ಯಾ ವಿವಾಹ/ ನಿಖಾ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಇರುವ ಯೋಜನೆ. ಕಳೆದ ವರ್ಷದ ಡಿಸೆಂಬರ್ 18ರಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಈ ಯೋಜನೆಯಡಿ ನೀಡುತ್ತಿದ್ದ ನೆರವನ್ನು 28 ಸಾವಿರದಿಂದ 51 ಸಾವಿರಕ್ಕೆ ಹೆಚ್ಚಿಸಿದೆ. ಯೋಜನೆಗೆ ಅರ್ಜಿಗಳ ಮಹಾಪೂರವೇ ಹರಿದುಬರುತ್ತಿದ್ದು, ಮನೆಮನೆಗಳಿಗೆ ಭೇಟಿ ನೀಡಿ ಶೌಚಾಲಯ ಇದೆಯೇ ಎಂದು ಪರಿಶೀಲಿಸುವುದು ಅಧಿಕಾರಿಗಳಿಗೆ ಅಸಾಧ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News