ಪಿಎಂಸಿ ಬ್ಯಾಂಕ್ ಗ್ರಾಹಕರ ಹಣ ವಾಪಸಾತಿಗೆ ಕ್ರಮ ಕೈಗೊಳ್ಳಲು ಆರ್‌ಬಿಐಗೆ ಸೂಚನೆ : ನಿರ್ಮಲಾ ಸೀತಾರಾಮನ್

Update: 2019-10-10 16:04 GMT

ಹೊಸದಿಲ್ಲಿ, ಅ.10: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ ಜಮೆ ಮಾಡಿರುವ ಹಣವನ್ನು ವಾಪಸು ಪಡೆಯಲು ಗ್ರಾಹಕರಿಗೆ ಶೀಘ್ರ ಅನುಕೂಲ ಮಾಡಿಕೊಡುವಂತೆ ಆರ್‌ಬಿಐ ಗವರ್ನರ್‌ಗೆ ತಿಳಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಂಬೈಗೆ ಆಗಮಿಸಿರುವ ನಿರ್ಮಲಾ ಸೀತಾರಾಮನ್‌ರನ್ನು ಮುಂಬೈಯ ಬಿಜೆಪಿ ಕಚೇರಿಯಲ್ಲಿ ಪಿಎಂಸಿ ಬ್ಯಾಂಕ್‌ನ ಗ್ರಾಹಕರು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ನಿವೇದಿಸಿಕೊಂಡರು. ಬ್ಯಾಂಕ್‌ನಲ್ಲಿಟ್ಟಿರುವ ಹಣವನ್ನು ಮರಳಿ ಪಡೆಯಲು ಆರ್‌ಬಿಐ ವಿಧಿಸಿರುವ ನಿರ್ಬಂಧದಿಂದ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕಿನ ಗ್ರಾಹಕರು ಪ್ರತಿಭಟನೆ ನಡೆಸುತ್ತಿರುವುದನ್ನು ಸಚಿವೆಯ ಗಮನಕ್ಕೆ ತರಲಾಯಿತು.

ಬ್ಯಾಂಕಿನಲ್ಲಿ ಅಕ್ರಮ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದೊಡನೆ ಬ್ಯಾಂಕಿನಿಂದ ಹಣ ಹಿಂಪಡೆಯಲು ಕೆಲವೊಂದು ನಿರ್ಬಂಧಗಳನ್ನು ಆರ್‌ಬಿಐ ವಿಧಿಸಿತ್ತು. ಒಂದು ಖಾತೆಯಿಂದ ಕೇವಲ 1000 ರೂ. ವಾಪಸು ಪಡೆಯಬಹುದು ಎಂದು ತಿಳಿಸಿದ್ದ ಆರ್‌ಬಿಐ ಬಳಿಕ ಗ್ರಾಹಕರ ತೀವ್ರ ಪ್ರತಿರೋಧದಿಂದ ಈ ಮಿತಿಯನ್ನು 25000 ರೂ.ಗೆ ಹೆಚ್ಚಿಸಿತ್ತು. ತಮ್ಮ ಉಳಿತಾಯದ ಹಣವನ್ನು ಹಿಂಪಡೆಯಲು ಮಿತಿ ಹೇರಬಾರದು. ಈ ಬಗ್ಗೆ ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು ಎಂದು ಗ್ರಾಹಕರು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾ ನಿರತ ಗ್ರಾಹಕರಿಗೆ ಸಮಾಧಾನ ಹೇಳಿದ ಸಚಿವೆ, ಸಹಕಾರಿ ಬ್ಯಾಂಕ್‌ಗಳ ನಿಯಂತ್ರಣದ ವಿಷಯದಲ್ಲಿ ಕೇಂದ್ರ ಸರಕಾರಕ್ಕೆ ಯಾವುದೇ ಪಾತ್ರವಿಲ್ಲ. ಆದರೂ, ಸಹಕಾರಿ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯ ಬಗ್ಗೆ ನಿಗಾ ಇರಿಸಲು ವಿತ್ತ ಸಚಿವಾಲಯದ ಅಧಿಕಾರಿಗಳ ನೇತೃತ್ವದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ಗ್ರಾಹಕರು ಶೀಘ್ರ ಹಣ ವಾಪಸು ಪಡೆಯಲು ಅನುಮತಿ ನೀಡುವಂತೆ ಆರ್‌ಬಿಐ ಗವರ್ನರ್‌ಗೆ ದೂರವಾಣಿ ಕರೆ ಮಾಡಿ ತಿಳಿಸುತ್ತೇನೆ ಎಂದು ಸಚಿವೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News